ಮಂದಗತಿಯಲ್ಲಿ ಸಾಗಿದ ಸಾರಕ್ಕಿ ಕೆರೆ ಒತ್ತುವರಿ ತೆರವು 
ಜಿಲ್ಲಾ ಸುದ್ದಿ

ಮಂದಗತಿಯಲ್ಲಿ ಸಾಗಿದ ತೆರವು

ಮೂರು ದಿನಗಳ ಹಿಂದೆ ಬಿರುಸಾಗಿ ಆರಂಭವಾಗಿದ್ದ ಸಾರಕ್ಕಿ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಭಾನುವಾರ ಮಂದಗತಿಯಲ್ಲಿ ಸಾಗಿತ್ತು...

ಬೆಂಗಳೂರು: ಮೂರು ದಿನಗಳ ಹಿಂದೆ ಬಿರುಸಾಗಿ ಆರಂಭವಾಗಿದ್ದ ಸಾರಕ್ಕಿ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಭಾನುವಾರ ಮಂದಗತಿಯಲ್ಲಿ ಸಾಗಿತ್ತು.

ಶನಿವಾರ ಬಂದ್ ಇದ್ದಿದ್ದರಿಂದ ಕಾರ್ಯಾಚರಣೆ ನಡೆಯದೆ ಕಟ್ಟಡ ತ್ಯಾಜ್ಯಗಳನ್ನು ಮಾತ್ರ ಸಾಗಿಸಲಾಗಿತ್ತು. ಭಾನುವಾರ ಕಾರ್ಯಾಚರಣೆ ನಡೆಯುತ್ತಿದ್ದರೂ ಮೊದಲಿನ ಬಿರುಸು ಕಳೆದುಕೊಂಡಿತ್ತು. ಜಿಲ್ಲಾಡಳಿತ ಮೂರು ತಂಡಗಳನ್ನು ರಚಿಸಿದ್ದರೂ, ಕಾರ್ಯಾಚರಣೆಯಲ್ಲಿ ಕೆಲವೇ ಕಾರ್ಮಿಕರು ಕಂಡಬಂದರು. ಬಂದ್ ವೇಳೆ ಶಾಂತಿ ಕಾಪಾಡಲು ಪೊಲೀಸರನ್ನು ನಿಯೋಜಿಸಿದ್ದು, ಮರುದಿನವೂ ಕಾರ್ಯಾಚರಣೆ ಸ್ಥಳದಲ್ಲಿ ವಿರಳ ಸಂಖ್ಯೆಯಲ್ಲಿ ಪೊಲೀಸರು ಕಂಡುಬಂದರು. ಕೆಲವೇ ಜೆಸಿಬಿ ಹಾಗೂ ಹಿಟಾಚಿಗಳು ಕೆರೆ ಮುಂಭಾಗದ ಮೈದಾನದಲ್ಲಿದ್ದು, ಎರಡರಿಂದ ಮೂರು ಜಿಸಿಬಿ ಮಾತ್ರ ಕಾರ್ಯಾಚರಿಸುತ್ತಿತ್ತು.

ಕಾರ್ಯಾಚರಣೆ ಸೋಮವಾರಕ್ಕೆ ಪೂರ್ಣಗೊಳ್ಳುವ ವಿಶ್ವಾಸವನ್ನು ಜಿಲ್ಲಾಡಳಿತ ಮೊದಲ ದಿನವೇ ವ್ಯಕ್ತಪಡಿಸಿತ್ತು. ಆದರೆ, ಹಲವು ಕಟ್ಟಡಗಳು ಇನ್ನೂ ಬಾಕಿ ಉಳಿದಿದೆ. ಜಿಲ್ಲಾಡಳಿತ ಹೇಳುವ ಪ್ರಕಾರ ಶೇ.70ರಷ್ಟು ಕಾರ್ಯಾಚರಣೆ ಈಗಾಗಲೇ ಪೂರ್ಣಗೊಂಡಿದೆ. ಆಕ್ಸ್ ಫರ್ಡ್ ಮೆಡಿಕಲ್ ಕಾಲೇಜು ಸೇರಿದಂತೆ ಬೃಹತ್ ಕಟ್ಟಡಗಳು ಇನ್ನೂ ಹಾಗೆಯೇ ಉಳಿದಿವೆ. ಕೆರೆಯ ಪಕ್ಕದಲ್ಲಿ ಸಣ್ಣ ಮನೆಗಳನ್ನು ಒಡೆದಿದ್ದು, ನಿವಾಸಿಗಳೆಲ್ಲರೂ ಮನೆಗಳನ್ನು ಖಾಲಿ ಮಾಡಿ ಸ್ಥಳದಿಂದ ಬೇರೆಡೆಗೆ ತೆರಳಿದ್ದಾರೆ. ಕೆಲವೆಡೆ ಒಡೆದ ಮನೆಗಳ ಕಲ್ಲು ರಾಶಿಯ ಮೇಲೆಯೇ ನಿವಾಸಿಗಳು ಅಸಹಾಯಕರಾಗಿ ಕುಳಿತಿರುವುದು ಕಂಡುಬಂತು. ಕೆರೆಯ ಅಕ್ಕಪಕ್ಕ ಮೌನ ಆವರಿಸಿದ್ದು, ಕಟ್ಟಡ-ಮನೆಗಳಿಂದ ತುಂಬಿಹೋಗಿದ್ದ ಪ್ರದೇಶ ಈಗ ಬಯಲು ಸೀಮೆಯಂತಾಗಿದೆ.

 ಸ್ವಯಂ ಆಗಿ ತೆರವು; ಜಿಲ್ಲಾಡಳಿತಕ್ಕೆ ತಗ್ಗಿದ ಹೊರೆ: ಕೆರೆ ಜಾಗದಲ್ಲಿ ಎರಡು-ಮೂರು ಅಡಿಗಳಲ್ಲಿ ಮನೆ ನಿರ್ಮಿಸಿದವರು, ಕಾಂಪೌಂಡ್ ನಿರ್ಮಿಸಿದವರು ತಾವಾಗಿಯೇ ಕಾರ್ಯಾಚರಣೆ ಮಾಡುತ್ತಿರುವುದು ಜಿಲ್ಲಾಡಳಿತ ಹೊರೆಯನ್ನು ಕಡಿಮೆ ಮಾಡಿದೆ. ಕೆಲವು ಸ್ಥಳಗಳಲ್ಲಿ ಮನೆ ಮಾಲೀಕರು ತಾವೇ ವಾಸಿಸುತ್ತಿರುವ ಮನೆಗಳಲ್ಲಿ 2-3 ಅಡಿ ಒತ್ತುವರಿಯಾಗಿರುವ ಜಾಗವನ್ನು  ಒಡೆಯುತ್ತಿದ್ದರು.

ಕೆಲವು ಮನೆಗಳಲ್ಲಿ  ಬಾಡಿಗೆದಾರರು ವಾಸಿಸುತ್ತಿದ್ದು, ಮನೆ ಮಾಲೀಕರು ಕೂಲಿ ಕಾರ್ಮಿಕರನ್ನು ಕರೆಸಿ ಹಣ ನೀಡಿ, ಒತ್ತುವರಿ ಜಾಗದಲ್ಲಿ ಕಟ್ಟಿದ್ದ ಕಟ್ಟಡ ಒಡೆಯುತ್ತಿದ್ದರು. ಜಿಲ್ಲಾಡಳಿತ ದೊಡ್ಡ ಕಟ್ಟಡ ಮಾತ್ರವಲ್ಲದೆ ಸಣ್ಣ ಮನೆಗಳ ಕೆಲವು ಭಾಗಗಳನ್ನು ಜೆಸಿಬಿಯಂತಹ ದೊಡ್ಡ ಯಂತ್ರಗಳ ಮೂಲಕ ಒಡೆಯಲು ಬಂದಿದ್ದರಿಂದ, ಇಡೀ ಮನೆಯೇ ಕುಸಿಯುವ ಅಪಾಯವಿದೆ.  ಹೀಗಾಗಿ ಕಾರ್ಯಾಚರಣೆ ಆರಂಭವಾದಾಗಲೇ ಜೆಸಿಬಿಗಳಿಗೆ ಅವಕಾಶ ಮಾಡಿಕೊಡದ ಮಾಲೀಕರು ತಮ್ಮ ಸ್ವಂತ ಖರ್ಚಿನಲ್ಲೇ ಕಾರ್ಮಿಕರನ್ನು ಕರೆಸಿ ಮನೆಗಳ ಕೆಲವು ಭಾಗಗಳನ್ನು ಒಡೆಸುತ್ತಿದ್ದಾರೆ. ಈ ಹಿಂದೆ 2-3 ಅಡಿಗಳ ಒತ್ತುವರಿಯಾಗಿದ್ದರೆ ವಿನಾಯಿತಿ ನೀಡಬಹುದು ಎಂದು ಜಿಲ್ಲಾಡಳಿತ ಹೇಳಿತ್ತು.

ಅಧಿಕಾರಿಗಳು-ಮಾಲೀಕರ ಮಧ್ಯೆ ವಾಗ್ವಾದ

ಕೆರೆ ಜಾಗದಲ್ಲಿ ಪುರವಂಕರ ವಸತಿ ಸಂಕೀರ್ಣದ ಮಾಲೀಕರು ಹಾಕಿದ್ದ ತಂತಿಬೇಲಿಗಳನ್ನು ತೆಗೆದುಹಾಕಿದ್ದರೂ ಮತ್ತೆ ಹಾಕಿದ್ದರಿಂದ, ಮಾಲೀಕರು ಹಾಗೂ ಅಧಿಕಾರಿಗಳ ನಡುವೆ ಕೆಲಕಾಲ ವಾಕ್ಸಮರ ನಡೆಯಿತು. ವಸತಿ ಸಂಕೀರ್ಣದ ಮುಖ್ಯಸ್ಥ ಕ.ಜಗದೀಶ್ ಹಾಗೂ ವ್ಯವಸ್ಥಾಪಕ ನಾಗೇಶ್ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಈ ವಸತಿ ಸಂಕೀರ್ಣದ ಸುತ್ತ ತಂತಿಬೇಲಿ ಅಳವಡಿಸಿದ್ದು, ಕಾರ್ಯಾಚರಣೆ ಆರಂಭವಾದಾಗಲೇ ಕೆರೆಜಾಗದಲ್ಲಿ ತಂತೀಬೇಲಿ ಅಳವಿಡಿಸಬಾರದು ಎಂದು ಎಚ್ಚರಿಸಲಾಗಿತ್ತು.

ಹೀಗಾಗಿ ತಂತಿಬೇಲಿ ತೆಗೆದುಹಾಕಲಾಗಿತ್ತು. ಆದರೆ ಅಧಿಕಾರಿಗಳ ಮಾತು ಕೇಳದ ಮಾಲೀಕರು ಒಂದು ಬಾರಿ ಕಿತ್ತು ಹಾಕಿದ್ದ ತಂತಿಬೇಲಿಯನ್ನು, ನಾಯಿಗಳು ನುಸುಳುತ್ತವೆ ಎಂಬ ಕ್ಷುಲ್ಲಕ ಕಾರಣಕ್ಕೆ ಮತ್ತೆ ಅಳವಡಿಸಿದ್ದರು. ಕೆಲಕಾಲದ ಮಾತಿನ ಚಕಮಕಿ ನಂತರ ಪರಿಸ್ಥಿತಿ ತಿಳಿಯಾಯಿತು. ಅಧಿಕಾರಿಗಳ ಕೆಲಸಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಬಿಎಂಟಿಎಫ್ ಗೆ ದೂರು ನೀಡಲಾಯಿತು.

ಮೂಲ ಮಾಲೀಕರಿಂದ ವಸೂಲಿ
ಕಾರ್ಯಾಚರಣೆಯಲ್ಲಿ ಮನೆ ಕಳೆದುಕೊಂಡವರಿಗೆ ಜಿಲ್ಲಾಡಳಿತ ಪರಿಹಾರ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದರೆ, ಮೂಲ ದಾಖಲೆಗಳನ್ನು ಹುಡುಕಿ, ಅಕ್ರಮವಾಗಿ ಮನೆ ಅಥವಾ ನಿವೇಶನ ಮಾರಿದವರಿಂದಲೇ ಹಣ ಅಥವಾ ಆಸ್ತಿ ವಸೂಲಿ ಮಾಡುವ ಕ್ರಮದ ಬಗ್ಗೆ ಜಿಲ್ಲಾಡಳಿತ ಚಿಂತನೆ ನಡೆಸಿದೆ.

ಒತ್ತುವರಿ ಪ್ರದೇಶದಲ್ಲಿ ಎಷ್ಟೋ ವರ್ಷಗಳ ಹಿಂದೆ ನಕಲಿ ದಾಖಲೆ ಸೃಷ್ಟಿಸಿದ ಮೂಲ ಮಾಲೀಕರು ಮತ್ತೊಬ್ಬರಿಗೆ ನಿವೇಶನ, ಮನೆ ಮಾರಿದ್ದರು. ಇಂಥ ಮೂಲ ಮಾಲೀಕರನ್ನು ಹುಡುಕಿ, ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಮನೆ ವಂಚನೆಗೊಳಗಾದವರಿಗೆ ನೀಡಲಾಗುವುದು. ಇಟ್ಟಮಡು ಕೆರೆಯ 1.20 ಎಕರೆ ಜಾಗದ ಒತ್ತುವರಿಗೆ ಸಂಬಂಧಿಸಿದಂತೆ ಮೂಲ ಮಾಲೀಕರು ಯಾರು ಎಂದು ಪತ್ತೆ ಹಚ್ಚಲಾಗಿದೆ. ಇಂಥ ಮಾಲೀಕರನ್ನು ಹುಡುಕಿ ಪರಿಹಾರ ನೀಡಲಾಗುವುದು ಎಂದು ಉಪವಿಭಾಗಾಧಿಕಾರಿ ಎಲ್.ಸಿ.ನಾಗರಾಜು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT