ಬೆಂಗಳೂರು: ಸಾರಕ್ಕಿ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಮಂಗಳವಾರ ಅಂತಿಮ ಹಂತಕ್ಕೆ ತಲುಪಿದ್ದು, ಶೇ.10 ರಷ್ಟು ಕಾರ್ಯಾಚರಣೆ ಮಾತ್ರ ಬಾಕಿ ಉಳಿದಿದೆ.
ಕಾರ್ಯಾಚರಣೆ ನಡುವೆ ಕೆಲವು ಕಟ್ಟಡಗಳ ಮಾಲೀಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ. ಬೃಹತ್ ಕಟ್ಟಡಗಳನ್ನು ಈಗಾಗಲೇ ಒಡೆದಿದ್ದು, ಇನ್ನು ನೆಲ ಅಂತಸ್ತುಗಳನ್ನು ಮಾತ್ರ ಒಡೆಯುವುದು ಬಾಕಿಯಿದೆ. 5-10 ಕಟ್ಟಡಗಳಲ್ಲಿ ಮಾತ್ರ ಇನ್ನೂ 2, 3 ಅಂತಸ್ತುಗಳನ್ನು ಒಡೆಯುವ ಕೆಲಸ ಬಾಕಿಯಿದೆ. ಕೆಲವು ಮನೆಗಳನ್ನು ಮನೆ ಮಾಲೀಕರೇ ಒಡೆಯುತ್ತಾರೆ ಎಂದು ಜಿಲ್ಲಾಡಳಿತಕ್ಕೆ ಸ್ಪಷ್ಟನೆ ಸಿಕ್ಕಿದೆ.
ಆದ್ದರಿಂದ, ಹೊರೆಯೂ ಕಡಿಮೆಯಾದಂತಾಗಿತ್ತು. ಇಂಥ ಮನೆಗಳು ಕೆರೆ ಬದಿಯಲ್ಲಿದ್ದು, 2-3 ಅಡಿಗಳಷ್ಟು ಮಾತ್ರ ಒಡೆಯಬೇಕಿದೆ. ಆದರೆ ಈ ಕೆಲಸವನ್ನು ಮಾಲೀಕರೇ ಮುಗಿಸುವುದಾಗಿ ಹೇಳಿದ್ದು, ಒತ್ತುವರಿ ತೆರವು ಮಾಡಲಾಗಿದೆಯೇ ಎಂದು ಪರಿಶೀಲಿಸಲು ಅಧಿಕಾರಿಗಳು ಭೇಟಿ ನೀಡಿದರು.ಕಾರ್ಯಾಚರಣೆ ಮುಗಿದ ಬಳಿಕ ಈ ಪ್ರದೇಶವನ್ನು ಬಿಬಿಎಂಪಿಗೆ ನೀಡಲಿದ್ದು, ಕೆರೆ ಸುತ್ತ ಬೇಲಿ ಹಾಕಬೇಕಿದೆ. ಅಂಜನಾಪುರ ಕ್ವಾರಿಗೆ ಕಟ್ಟಡ ತ್ಯಾಜ್ಯ ಸಾಗಿಸುವ ಕೆಲಸವನ್ನೂ ಚುರುಕುಗೊಳಿಸಲಾಗಿದೆ. ಪ್ರತಿದಿನ 100ಕ್ಕೂ ಅಧಿಕ ಲೋಡ್ ಕಟ್ಟಡ ತ್ಯಾಜ್ಯವನ್ನು ಸಾಗಿಸಲಾಗುತ್ತಿದೆ.