ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಲು ಉದ್ದೇಶಿಸಿರುವ 2015 ರ ರಸ್ತೆ ಸಾರಿಗೆ ಸುರಕ್ಷತಾ ಮಸೂದೆಯನ್ನು ವಿರೋಧಿಸಿ ವಿವಿಧ ಕಾರ್ಮಿಕ ಸಂಘಟನೆಗಳು ಏಪ್ರಿಲ್ 30 ರಂದು ಕರೆ ನೀಡಿರುವ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಬೆಂಗಳೂರಿನ ಆಟೋ ಸಂಘಟನೆಗಳು ಬೆಂಬಲ ನೀಡಿವೆ.
ಹೀಗಾಗಿ ಒಂದು ದಿನದ ಮಟ್ಟಿಗೆ ಸರ್ಕಾರಿ ಬಸ್ ಸೇವೆ ಸ್ಥಗಿತಗೊಳ್ಳಲಿದೆ ಎಂದು ಕಾರ್ಮಿಕ ಸಂಘಟನೆಗಳ ಮುಖಂಡರು ಹೇಳಿದ್ದಾರೆ.
ಮಸೂದೆಯ ಕರಡು ಪ್ರತಿಯ ಪ್ರಕಾರ ಚಾಲಕರು ವಾಹನವನ್ನು ಓವರ್ ಟೇಕ್ ಮಾಡುವುದು ಸೇರಿದಂತೆ ಸಣ್ಣ ತಪ್ಪುಗಳನ್ನು ಮಾಡಿದರೂ ಜೈಲು ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಈ ವಿಧೇಯಕ ಜಾರಿಗೆ ಬಂದರೆ ಚಾಲಕರು ಜೈಲು ಪಾಲಗುತ್ತಾರೆ. ಸಾರಿಗೆ ತಜ್ಞರೊಂದಿಗೆ ಚರ್ಚಿಸದೆ ಇದನ್ನು ಜಾರಿಗೆ ತರಬಾರದು ಎಂದು ವಿವಿಧ ಸಂಘಟನೆಗಳು ಒತ್ತಾಯಿಸಿವೆ. ಸಾರಿಗೆ ಸಂಘಟನೆಗಳು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಸಿಇಟಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಏಪ್ರಿಲ್ 29 ಹಾಗೂ 30 ರಂದು ನಡೆಯಬೇಕಾಗಿದ್ದ ಸಿಇಟಿ ಪರೀಕ್ಷೆಗಳು ಮೇ, 12 ಮತ್ತು 13 ರಂದು ನಡೆಯಲಿವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆದೇಶ ಹೊರಡಿಸಿದೆ.