ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಆರೋಪ ಪ್ರಕರಣದ ಆರೋಪಿ ಅಶ್ವಿನ್ ರಾವ್ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯ ಗುರುವಾರಕ್ಕೆ (ಆ.6) ಮುಂದೂಡಿದೆ. ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಎಂಜಿನಿಯರ್ ಕೃಷ್ಣಮೂರ್ತಿ ದೂರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ಅವರು ದಾಖಲಿಸಿದ್ದ ಪ್ರಕರಣದಲ್ಲಿ ಅಶ್ವಿನ್ ರಾವ್ ಮೊದಲನೇ ಆರೋಪಿಯಾಗಿದ್ದಾರೆ. ಪ್ರಕರಣದಲ್ಲಿ ಇವರ ಬಂಧನವಾಗದ ಕಾರಣ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.
ಮಂಗಳವಾರ ವಿಚಾರಣೆ ನಡೆಸಿದ ಲೋಕಾಯುಕ್ತ ವಿಶೇಷ ನ್ಯಾಯಾಲಯ ನ್ಯಾಯಾಧೀಶ ವಿ.ಜಿ.ಬೋಪಯ್ಯ, ಮತ್ತೊಬ್ಬ ದೂರುದಾರ ಚನ್ನಬಸಪ್ಪ ಅವರ ದೂರಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಗುರುವಾರ ನಡೆಯಲಿದ್ದು, ಅದೇ ದಿನ ಎರಡು ಅರ್ಜಿಯ ವಿಚಾರಣೆ ನಡೆಸಲಾಗುವುದು ಎಂದು ಹೇಳಿ ವಿಚಾರಣೆಯನ್ನು ಮುಂದೂಡಿದರು.
ಎಸ್‍ಐಟಿ ಪೊಲೀಸರ ವಶದಲ್ಲಿರುವ ಅಶ್ವಿನ್‍ರಾವ್ ಅವರ ಕಸ್ಟಡಿ ಅವಧಿ ಗುರುವಾರಕ್ಕೆ ಅಂತಿಮಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಈ ವೇಳೆ ಜಾಮೀನು ಅರ್ಜಿಯ ವಿಚಾರಣೆಯನ್ನು ಸಹ ನಡೆಸಲಾಗುವುದು ಎಂದು ನ್ಯಾಯಲಯ ಹೇಳಿದೆ.