ಬೆಂಗಳೂರು: ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವುದರಲ್ಲಿ ಕರ್ನಾಟಕ ದೇಶದಲ್ಲೇ ಮುಂದಿದೆ.
ಕೆಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವಾಲಯ ಬಿಡುಗಡೆ ಮಾಡಿರುವ ವರದಿಯಲ್ಲಿ ಉಳಿದ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಅತಿ ಹೆಚ್ಚು ಸಂಖ್ಯೆಯ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ವೃತ್ತಿಪರ ಉನ್ನತ ಶಿಕ್ಷಣ ಕೋರ್ಸ್ ಗಳಿಗೆ ಪ್ರವೇಶ ಪಡೆದಿದ್ದಾರೆ ಎಂದು ತಿಳಿಸಿದೆ.
೨೦೧೪-೨೦೧೫ ನೆ ಸಾಲಿನಲ್ಲಿ ಒಂದು ಕೋರ್ಸ್ ಹೊರತುಪಡಿಸಿ ಮತ್ತೆಲ್ಲಾ ಉನ್ನತ ಶಿಕ್ಷಣ ಕೋರ್ಸ್ ಗಳಿಗೆ ಕರ್ನಾಟಕದ ಶಿಕ್ಷಣ ಸಂಸ್ಥೆಗಳು ೨೦% ಸೀಟುಗಳನ್ನು ಅಲ್ಪಸಂಖ್ಯಾತರಿಗೆ ನೀಡಿದೆ. ಇದು ಎಂಜಿನಿಯರಿಂಗ್ ನಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, ಅಲ್ಪಸಂಖ್ಯಾತರು ಒಟ್ಟು ೧೫,೦೫೦ ಸೀಟುಗಳಿಗೆ (೨೪.೯%) ಪ್ರವೇಶ ಪಡೆದಿದ್ದಾರೆ. ಅವರಲ್ಲಿ ೫೩೧೪ ಬಾಲಕಿಯರು ಹಾಗು ೯೭೩೬ ಬಾಲಕರು. ನಂತರದ ಸ್ಥಾನದಲ್ಲಿ ಪ್ರಬಂಧಕ ಶಿಕ್ಷಣ ಕೋರ್ಸ್ ಗಳು, ನಂತರ ಫಾರ್ಮಸಿ ಮತ್ತು ವಿನ್ಯಾಸ ಕೋರ್ಸ್ ಗಳು ಸ್ಥಾನ ಪಡೆದಿವೆ.