ಬೆಂಗಳೂರು: ಮೇಯರ್, ಉಪ ಮೇಯರ್ ಚುನಾವಣೆ ಮುಕ್ತಾಯಗೊಳ್ಳುವವರೆಗೆ ಬೆಂಗಳೂರು ಬಿಟ್ಟು ತೆರಳದಂತೆ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಬಿಬಿಎಂಪಿ ಕಾಂಗ್ರೆಸ್ ಸದಸ್ಯರಿಗೆ ಕಟ್ಟಪ್ಪಣೆ ನೀಡಿದ್ದಾರೆ.
ಪ್ರದೇಶ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪಾಲಿಕೆಯ ಕಾಂಗ್ರೆಸ್ ಸದಸ್ಯರು, ಶಾಸಕರು ಮತ್ತು ಬೆಂಗಳೂರಿನ ಸಚಿವರ ಸಭೆಯಲ್ಲಿ ಶನಿವಾರ ಈ ಕಟ್ಟಪ್ಪಣೆ ವಿಧಿಸಲಾಗಿದೆ. ಈ ಮೂಲಕ ಬಿಬಿಎಂಪಿ ಅಧಿಕಾರ ಗ್ರಹಣಕ್ಕೆ ಕಾಂಗ್ರೆಸ್ ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದೆ ಎಂಬ ಸ್ಪಷ್ಟ ಸಂದೇಶವನ್ನು ಕಾಂಗ್ರೆಸ್ ಸದಸ್ಯರಿಗೆ ನೀಡಲಾಗಿದೆ. ಆದರೆ, ಸಿಎಂ ಸಿದ್ದರಾಮಯ್ಯ ಅವರಾಗಲಿ, ಡಾ.ಪರಮೇಶ್ವರ ಅವರಾಗಲಿ ಮೈತ್ರಿ ಪ್ರಕ್ರಿಯೆ ನಡೆಯುತ್ತಿರುವ ಬಗ್ಗೆ ಸಭೆಯಲ್ಲಿ ಒಂದೇ ಒಂದು ಅಕ್ಷರ ಮಾತನಾಡಿಲ್ಲ.
ಕಾಂಗ್ರೆಸ್ ಸದಸ್ಯರು ಭವಿಷ್ಯದಲ್ಲಿ ಯಾವ ರೀತಿ ಕಾರ್ಯನಿರ್ವಹಣೆ ಮಾಡಬೇಕು? ಪ್ರತಿಪಕ್ಷದ ಜವಾಬ್ದಾರಿ ಏನು? ಎಂಬ ಬಗ್ಗೆ ಕಿವಿ ಮಾತು ಹೇಳಿದ್ದಾರೆ. ಆದರೆ ಬೆಂಗಳೂರು ಬಿಟ್ಟು ತೆರಳದಂತೆ ನೀಡಿರುವ ಸೂಚನೆ ಹಿನ್ನೆಲೆಯನ್ನು ಗ್ರಹಿಸಿರುವ ಕಾಂಗ್ರೆಸ್ ಸದಸ್ಯರು ಅಧಿಕಾರದ ಕನಸು ಕಾಣಲಾರಂಭಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ.ಪರಮೇಶ್ವರ ಎಂಟು ಸಲಹೆಗಳನ್ನು ಸದಸ್ಯರಿಗೆ ನೀಡಿದ್ದಾರೆ. ಪಕ್ಷಕ್ಕೆ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಇರಬೇಕು. ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಜನತಗೆ ನೀಡಿದ್ದ ಭರವಸೆಗಳನ್ನು ಈಡೇರಿಸಲು ಪ್ರಯತ್ನಿಸುಬೇಕು. ಈ ಹಿಂದೆ ಬಿಬಿಎಂಪಿಯಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ಜನರಿಗೆ ತಿಳಿಸಬೇಕು. ಸರ್ಕಾರದ ಯೋಜನೆಗಳು ನೈಜ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು.
ಪ್ರತಿ ವಾರ್ಡ್ ಗಳಲ್ಲಿ ಜನತೆಗೆ ಸಹಾಯ ಸಹಾಯವಾಣಿ ಸ್ಥಾಪಿಸಬೇಕು. ಗೆದ್ದಿದ್ದೇವೆಂದು ಕೈಕಟ್ಟಿಕೂರದೇ ಪಕ್ಷದ ಇಮೇಜ್ ಹೆಚ್ಚಿಸಲು ಶ್ರಮ ಪಡಬೇಕು. ಬಿಬಿಎಂಪಿ ಆಸ್ತಿ ರಕ್ಷಣೆಗೆ ಕಟಿ ಬದ್ಧರಾಗಿರಬೇಕು. ಸಾರ್ವಜನಿಕ ಆಶೋತ್ತರಕ್ಕೆ ಸ್ಪಂದಿಸಬೇಕು ಎಂದು ಸಲಹೆ ನೀಡಿದ್ದಾರೆ.
ನಿರೀಕ್ಷಿತ ಫಲಿತಾಂಶ ಬಂದಿಲ್ಲ
ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ 90ರಿಂದ 100 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಮಾಡಿದ್ದೆವು. ಆದರೆ, ನಮ್ಮ ನಿರೀಕ್ಷೆ ಹುಸಿಯಾಯ್ತು. ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಮತಗಳಿಕೆಯಲ್ಲಿ ಶೇ.1 ರಷ್ಟು ಮಾತ್ರ ಅಂತರವಿದೆ. ಇದರಿಂದಾಗಿ ಕಾಂಗ್ರೆಸ್ 24 ಸ್ಥಾನಗಳನ್ನು ಕಳೆದುಕೊಂಡಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ 7.10 ಲಕ್ಷ ಮತಗಳ ಅಂತರವಿತ್ತು. ಆದರೆ ಬಿಬಿಎಂಪಿ ಚುನಾವಣೆಯಲ್ಲಿ ಅವರು ನಮಗಿಂತ ಕೇವಲ 39ಸಾವಿರ ಮತಗಳನ್ನು ಮಾತ್ರ ಹೆಚ್ಚುವರಿಯಾಗಿ ಪಡೆದಿದ್ದಾರೆ ಎಂದರು.