ಬೆಂಗಳೂರು: ನಗರದಲ್ಲಿ ದ್ವಿಚಕ್ರ ವಾಹನ ಅಪಘಾತಗಳಿಂದ ಸಂಭವಿಸುತ್ತಿರುವ ಸಾವು ನೋವುಗಳ ಕಡಿಮೆಗೊಳಿಸಲು ನಗರ ಸಂಚಾರ ಪೊಲೀಸರು 'ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಿ' ಹೆಸರಿನಲ್ಲಿ ಒಂದು ತಿಂಗಳ ಕಾಲ ವಿಶೇಷ ಜಾಗೃತಿ ಅಭಿಯಾನ ಆರಂಭಿಸಿದ್ದಾರೆ.
ಶನಿವಾರ ಕ್ವೀನ್ಸ್ ವೃತ್ತದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಎನ್.ಎಸ್. ಮೇಘರಿಖ್, ದ್ವಿಚಕ್ರ ವಾಹನ ಸವಾರರು ಅಪಘಾತ ಪ್ರಕರಣಗಳಲ್ಲಿ ತಲೆಗೆ ಪೆಟ್ಟಾಗಿ ಸಾವುನೋವು ಸಂಭವಿಸುವ ಸಾಧ್ಯತೆಗಳು ಹೆಚ್ಚಿರುತ್ತವೆ ಎಂದರು. ತಲೆಗೆ ಪೆಟ್ಟಾಗಿ ಮರಣ ಸಂಭವಿಸುವ ಸಾಧ್ಯತೆ ಶೇ.42ರಷ್ಟು ಕಡಿಮೆ ಹಾಗೂ ಗಾಯಗೊಳ್ಳುವ ಪ್ರಮಾಣ ಶೇ.69ರಷ್ಟು ಕಡಿಮೆ. ಹೀಗಾಗಿ, ಸವಾರರಲ್ಲಿ ಜಾಗೃತಿ ಮೂಡಿಸಲು ಅಭಿಯಾನ ಆರಂಭಿಸಲಾಗಿದೆ ಎಂದು ಹೇಳಿದರು.
ಕಡ್ಡಾಯದ ಜೊತೆ ಜಾಗೃತಿಯೂ ಬೇಕು: ದ್ವಿಚಕ್ರ ವಾಹನಗಳಿಗೆ ಬೆಂಗಳೂರು ನಗರ ರಾಜಧಾನಿ. ಸ್ವಂತ ಆಲೋಚನೆ ಮೇಲೆ ಸವಾರರು ಹೆಲ್ಮೆಟ್ ಧರಿಸುವುದು ಅವಶ್ಯಕ. ದ್ವಿಚಕ್ರ ವಾಹನ ಸವಾರರ ಪೈಕಿ 18ರಿಂದ 35 ವಯಸ್ಸಿನವರೇ ಹೆಚ್ಚು. ಹೀಗಾಗಿ, ಅವರಲ್ಲಿ ಜವಾಬ್ದಾರಿ, ಜಾಗೃತಿ ಹಾಗೂ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಬೇಕಿದೆ ಎಂದರು.
ಸರಿಯಾಗಿ ಧರಿಸಿ, ತೋರಿಕೆ ಬೇಡ: ಸಾರಿಗೆ ಆಯುಕ್ತ ಡಾ.ರಾಮಲಿಂಗೆಗೌಡ, ಸವಾರರು ನಾಮಕಾವಸ್ಥೆ ಹೆಲ್ಮೆಟ್ ಧರಿಸದೆ ಗುಣಮಟ್ಟದ ಹೆಲ್ಮೆಟ್ ಧರಿಸಬೇಕು. ಹೆಲ್ಮೆಟ್ ಧರಿಸದೆ ಸಂಭವಿಸುವ ಅಪಘಾತಗಳಿಂದ ಅವರನ್ನು ನಂಬಿಕೊಂಡಿರುವ ಕುಟುಂಬದವರ ಬಗ್ಗೆ ಯೋಚಿಸಬೇಕು ಎಂದರು. ದಿ ಪ್ರಿಂಟರ್ಸ್ ಮೈಸೂರು ಲಿಮಿಟೆಡ್ ಉಪ ವ್ಯವಸ್ಥಾಪಕ ಎಸ್.ವಿ. ಶ್ರೀನಿವಾಸನ್ ಅವರು ಹೆಲ್ಮೆಟ್ ಮಹತ್ವದ ಬಗ್ಗೆ ಕಿರುಹೊತ್ತಿಗೆ ಬಿಡುಗಡೆ ಮಾಡಿದರು. ಹರ್ಲಿ ಡೇವಿಡ್ ಸನ್ ಇಂಡಿಯಾ ಬುಲ್ ರೈಡರ್ಸ್, ಜಾವಾ ರೈಡರ್ಸ್, ಕೋಬ್ರಾ ಗ್ರೂಪ್ ಹಾಗೂ ಕಾಲೇಜು ವಿದ್ಯಾರ್ಥಿಗಳು ಬೈಕ್ ರ್ಯಾಲಿ ನಡೆಸಿದರು.