ಬೆಂಗಳೂರು: ಜಾನಪದ ಕಲೆಗಳು ಹಿಂಸಾ ವಿರೋಧಿ ಮತ್ತು ಸಮಾಜದ ಸಹಿಷ್ಣುತೆ ಸಾರುತ್ತವೆ. ಪ್ರಸ್ತುತ ದೇಶದಲ್ಲಿ ಉದ್ಭವಿಸಿರುವ ಅಸಹಿಷ್ಣುತೆಗೆ ಜಾನಪದ ಕಲೆ ಉತ್ತಮ ಚುಚ್ಚುಮದ್ದು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಸಲಹೆ ನೀಡಿದರು.
ನಗರದ ನಯನ ಸಭಾಂಗಣದಲ್ಲಿ ಗುರುವಾರ ಕೆ.ಆರ್. ಲಿಂಗಪ್ಪ ಜಾನಪದ ಪ್ರತಿಷ್ಠಾನ ಮತ್ತು ಅಲ್ಲಮ ಕಲಾಶಾಲೆ ಸಹಯೋಗದಲ್ಲಿ ಚೌಡಿಕೆ ಜನಪದ ಕಲಾವಿದೆ ರಾಧಾಬಾಯಿ ಅವರಿಗೆ `ಕೆ.ಆರ್.ಲಿಂಗಪ್ಪ ಜಾನಪದ ಪ್ರಶಸ್ತಿ' ಪ್ರದಾನ ಮಾಡಿ ಅವರು ಮಾತನಾಡಿದರು.
ಜಾನಪದ ಸಹಿಷ್ಣು ಸಮಾಜದ ಫಲ. ಯಾವ ಸಮಾಜ ವೈವಿಧ್ಯತೆ ಉಳಿಸಿಕೊಳ್ಳುವುದೋ ಅಲ್ಲಿ ಸಹಿಷ್ಣುತೆ ಇರುತ್ತೆ. ವೈವಿಧ್ಯತೆ ನಾಶಮಾಡುವ ಪ್ರವೃತ್ತಿ ಇರುವಲ್ಲಿ ಅಸಹಿಷ್ಣುತೆ ಬೆಳೆಯುತ್ತೆ. ಕ್ರಮಬದ್ಧ ಶಿಕ್ಷಣ ಪಡೆಯದ ಅವಿದ್ಯಾವಂತ, ಅಶಿಕ್ಷಿತರಾಗಿರುವ ಶ್ರಮಜೀವಿ ವರ್ಗದಿಂದ ಸಹಿಷ್ಣುತೆ ಪಾಠವನ್ನು ಬುದ್ಧಿವಂತರು, ರಾಜಕಾರಣಿಗಳು ಮತ್ತು ಶಿಕ್ಷಿತರು ಸಾಕಷ್ಟು ಕಲಿಯಬೇಕಿದೆ. ಆದರ್ಶದ ಮಾದರಿಗಳು ಇದ್ದಲ್ಲಿ ಸಹಿಷ್ಣುತೆಯ ಸಮಾಜ ನಿರ್ಮಾಣ ಸಾಧ್ಯ. ಸಮಕಾಲೀನ ಅಗತ್ಯಗಳನ್ನು ಪೂರೈಸುವುದಕ್ಕೆ ವಸ್ತು ವಿಷಯಗಳನ್ನು ಅಕಾಡೆಮಿಗಳು, ಜಾನಪದ ವಿಶ್ವವಿದ್ಯಾಲಯ, ಖಾಸಗಿ ಸಂಘ ಸಂಸ್ಥೆಗಳು ಪ್ರಸಾರ ಮಾಡಬೇಕಿದೆ ಎಂದರು.
ಮೂರ್ಖತನ ಮಾತು: ಸಂವಿಧಾನವನ್ನು ಒಪ್ಪಿಕೊಂಡಿರುವ ಬಹುಸಂಸ್ಕೃತಿ, ವಿವಿಧ ಜನಾಂಗ ಹೊಂದಿರುವ ದೇಶದಲ್ಲಿ ಜಾನಪದ ಬಹುಸಂಸ್ಕೃತಿ ಒಕ್ಕೂಟವಾಗಿದೆ ಎಂಬುದನ್ನು ಮರೆಯಬಾರದು. ಜಾನಪದ ಕಲೆಯನ್ನು ಶಿಕ್ಷಿತರ ಮತ್ತು ಸಂಸ್ಕೃತಿರಹಿತರ ಕಲೆ ಎಂದು ಲೇವಡಿ ಮಾಡುವುದು ಮೂರ್ಖತನ. ವೈವಿಧ್ಯತೆಗಳಿಂದ ಕೂಡಿರುವ ಜಾನಪದ ಕಲೆಯ ಅಂತರಂಗದೊಳಗೆ ಜನರಲ್ಲಿ ಆತ್ಮವಿಶ್ವಾಸ ತುಂಬುವಂತಹ ಶಕ್ತಿ ಅಡಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾರತ ಯಾತ್ರಾ ಕೇಂದ್ರದ ಅಧ್ಯಕ್ಷ ಡಾ. ಬಿ.ಎಲ್. ಶಂಕರ್, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್, ಕೆ.ಆರ್.ಲಿಂಗಪ್ಪ ಜಾನಪದ ಪ್ರತಿಷ್ಠಾನದ ಅಧ್ಯಕ್ಷ ಗೊ. ರು. ಚನ್ನಬಸಪ್ಪ ಉಪಸ್ಥಿತರಿದ್ದರು.