ಬೆಳಗಾವಿ: ಇಲ್ಲಿನ ಸದಾಶಿವನಗರದ ಸ್ಮಶಾನ ಭೂಮಿ ಭಾನುವಾರ ಎಂದಿನಂತಿರಲಿಲ್ಲ. ಅದು ವೈಚಾರಿಕ ಕ್ರಾಂತಿಗೆ ನಾಂದಿ ಹಾಡಿತು. ಒಂದೆಡೆ ಸಮಾಜದಲ್ಲಿ ಬೇರೂರಿರುವ ಮೌಢ್ಯ, ಅಂಧಶ್ರದ್ಧೆಗಳ ಬಗ್ಗೆ ಮಠಾಧೀಶರು, ವಿಚಾರವಾದಿಗಳು ಚಿಂತನ-ಮಂಥನ ನಡೆಸಿದರೆ, ಇನ್ನೊಂದೆಡೆ ಆರು ಜನ ಮೃತರ ಅಂತ್ಯಕ್ರಿಯೆ ನಡೆಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಹಸ್ರಾರು ಜನರು ಅಲ್ಲಿಯೇ ಊಟ, ಉಪಹಾರ ಮಾಡಿದರು. ಮಾನವ ಬಂಧುತ್ವ ವೇದಿಕೆಯಿಂದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿ ಹೊಳಿ ನೇತೃತ್ವದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನವನ್ನು ಮೌಢ್ಯ ಧಿಕ್ಕರಿಸುವ ಪರಿವರ್ತನಾ ದಿನವನ್ನಾಗಿ ಆಚರಿಸುವ ಮೂಲಕ ಮೂಢ ನಂಬಿಕೆ, ಅಂಧಶ್ರದ್ಧೆಗೆ ಬಲಿಯಾಗದಂತೆ ಸಮಾಜಕ್ಕೆ ಮಠಾಧೀಶರು, ವಿಚಾರವಾದಿಗಳು ಕರೆ ಕೊಟ್ಟರು. ಸ್ಮಶಾನ ಭೂಮಿಯಲ್ಲಿ ನಿರ್ಮಿಸಲಾದ ಬೃಹತ್ ಶಾಮಿಯಾನದಲ್ಲಿ ಮುಖ್ಯ ಸಮಾರಂಭ ನಡೆದರೆ, ಇನ್ನೊಂದೆಡೆ ನಿರ್ಮಿಸಿದ್ದ ಶಾಮಿಯಾನದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಜನರಿಗಾಗಿ ಊಟ, ಉಪಹಾರಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿ ಹೊಳಿ, ಮಠಾಧೀಶರಾದ ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಸೇರಿದಂತೆ ಗಣ್ಯರು ಭೋಜನ ಮಾಡಿದರು. ವಿವಿಧ ಗೋಷ್ಠಿ, ಪವಾಡ ಬಯಲು ಕಾರ್ಯಕ್ರಮಗಳು ನಡೆದವು. ಎಲ್ಲರೂ ಸ್ಮಶಾನದಲ್ಲಿ ವಾಸ್ತವ್ಯ ಹೂಡಿದರು. ಇದೇ ಸಂದರ್ಭದಲ್ಲೇ ಮೃತರಾದ ಆರು ಜನರ ಶವಗಳನ್ನು ಅಂತ್ಯಸಂಸ್ಕಾರ ಮಾಡಲಾಯಿತು. ಬೆಳಗ್ಗೆಯಿಂದಲೇ ಸ್ಮಶಾನ ಭೂಮಿಯತ್ತ ಬಂದಿದ್ದ ಜನರು ರಾತ್ರಿವರೆಗೆ ಸ್ಥಳ ಬಿಟ್ಟು ಕದಲಲಿಲ್ಲ. ಕುರ್ಚಿಗಳೆಲ್ಲವೂ ಜನರಿಂದ ತುಂಬಿ ಹೋಗಿದ್ದವು.
ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಾಣೆಹಳ್ಳಿಯ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ವೈಧಿಕ ಪರಂಪರೆಯ ಜನರುಸಾಹಿತಿಗಳು, ರಾಜಕಾರಣಿಗಳು, ವ್ಯಾಪಾರಿಗಳು, ಮಠಾಧೀಶರ ಮುಖವಾಡದಲ್ಲಿ ಮೌಢ್ಯದ ಬೀಜ ಬಿತ್ತುತ್ತಿದ್ದಾರೆ. ಇದರಿಂದ ನಾವು ಬಳಹ ಎಚ್ಚರಿಕೆ ವಹಿಸಬೇಕು ಎಂದರು. ಪ್ರಗತಿಪರ ಸಾಹಿತಿ ಡಾ ಎಚ್. ಎಸ್. ಅನುಪಮಾ, ಬೈಲೂರಿನ ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಮತ್ತಿತರರು ಹಾಜರಿದ್ದರು.