ಬೆಂಗಳೂರು: ಪಾನಮತ್ತ ಬೈಕ್ ಸವಾರನೊಬ್ಬ ಕರ್ತವ್ಯ ನಿರತ ಸಂಚಾರಿ ಪೊಲೀಸ್ ಪೇದೆ ಮೇಲೆ ಹಲ್ಲೆ ನಡೆಸಿರುವ ಘಟನೆ ಕನಕಪುರ ರಸ್ತೆಯ ವಸಂತಪುರ ಕ್ರಾಸ್ ಬಳಿ ಬುಧವಾರ
ನಡೆದಿದೆ.
ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸ್ ಠಾಣೆಯ ಮುಖ್ಯಪೇದೆ ನಾರಾಯಣಪ್ಪ ಹಲ್ಲೆಗೆ ಒಳಗಾದವರು. ಈ ಸಂಬಂಧ ಹಲ್ಲೆ ನಡೆಸಿದ ಬಿಬಿಎಂಪಿಯ ಗುತ್ತಿಗೆದಾರ ಹಾಗೂ ಜೆ.ಪಿ.ನಗರ ನಿವಾಸಿ ನವೀನ್ ಗೌಡನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಏನಾಯಿತು?: ಬುಧವಾರ ರಾತ್ರಿ 8.30ರ ಸುಮಾರಿನಲ್ಲಿ ಕನಕಪುರ ರಸ್ತೆಯ ವಸಂತಪುರ ಕ್ರಾಸ್‍ನಲ್ಲಿ ಬೈಕ್ ಹಾಗೂ ಕಾರು ನಡುವೆ ಡಿಕ್ಕಿಯಾಗಿದೆ. ಇದರಿಂದ ನವೀನ್‍ಗೌಡ ಮತ್ತು ಕಾರು ಚಾಲಕ ರಸ್ತೆ ಮಧ್ಯೆ ಜಗಳಕ್ಕೆ ಬಿದ್ದಿದ್ದಾರೆ. ಇಬ್ಬರ ವಾಹನಗಳು ರಸ್ತೆ ಮಧ್ಯೆನಿಂತಿದ್ದರಿಂದ ಬೇರೆ ವಾಹನಗಳ ಸಂಚಾರಕ್ಕೆ ಅಡಚಣೆ ಆಗಿದೆ. ಇದೇ ವೇಳೆ ಸಮೀಪದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆ ನಾರಾಯಣಪ್ಪ ಇಬ್ಬರಿಗೂ ವಾಹನಗಳನ್ನು ತೆರವುಗೊಳಿಸುವಂತೆ ಹೇಳಿದ್ದಾರೆ.
ಈ ವೇಳೆ ಪಾನಮತ್ತನಾಗಿದ್ದ ನವೀನ್ ಏಕಾಏಕಿ ನಾರಾಯಣಪ್ಪ ಅವರ ಮುಖಕ್ಕೆ ಬಲವಾಗಿ ಗುದ್ದಿದ್ದಾನೆ. ಇದರಿಂದ ನಾರಾಯಣಪ್ಪ ಕುಸಿದು ಬಿದ್ದಿದ್ದಾರೆ. ಬಳಿಕ ನಾರಾಯಣಪ್ಪ ಅವರನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸುಬ್ರಮಣ್ಯಪುರ ಪೊಲೀಸರು, ಆರೋಪಿ ನವೀನ್‍ನನ್ನು ವಶಕ್ಕೆ ಪಡೆದಿದ್ದಾರೆ.