ಜಿಲ್ಲಾ ಸುದ್ದಿ

ಬನಶಂಕರಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ನಿರಾತಂಕ

Manjula VN

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯು ಬನಶಂಕರಿ 6ನೇ ಹಂತದಲ್ಲಿ ಸ್ಥಾಪಿಸಿರುವ ಘನತ್ಯಾಜ್ಯ ವಿಲೇವಾರಿ ಘಟಕದ ಕಾರ್ಯನಿರ್ವಹಣೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದಲ್ಲಿ ನಡೆಯುತ್ತಿರುವ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ನ್ಯಾಯಾಂಗ ನಿಂದನೆ ವಿಚಾರಣೆ ಪ್ರಕ್ರಿಯೆ ಪ್ರಶ್ನಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಹಾಗೂ ನ್ಯಾ.ಬಿ. ಮನೋಹರ್ ಅವರಿದ್ಧ ವಿಭಾಗೀಯ ಪೀಠ, ಈ ತಡೆಯಾಜ್ಞೆ ಹೊರಡಿಸಿ ವಿಚಾರಣೆಯನ್ನು ಮುಂದೂಡಿತು.

ಏನಿದು ಪ್ರಕರಣ?: ಬಿಬಿಎಂಪಿಯು ಬನಶಂಕರಿ 6ನೇ ಹಂತದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲಾಗಿತ್ತು. ಆದರೆ, ಇದಕ್ಕೆ ಪರಿಸರ ಇಲಾಖೆಯಿಂದ ಪಡೆದುಕೊಂಡ ಅನುಮತಿ
ಕಾನೂನುಬಾಹಿರವಾಗಿದೆ ಎಂದು ಜಯರಾಂಗೌಡ ಎನ್ನುವವರು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೆ ದೂರು ಸಲ್ಲಿಸಿದ್ದರು. ದೂರಿನ ಅನ್ವಯ ವಿಚಾರಣೆ ನಡೆಸಿದ್ದ ಹಸಿರು ನ್ಯಾಯಾಧೀಕರಣ, ಘನತ್ಯಾಜ್ಯ ವಿಲೇವಾರಿ ಘಟಕದ ಕಾರ್ಯನಿರ್ವಹಣೆಗೆ ತಡೆಯಾಜ್ಞೆ ನೀಡಿತ್ತು. ಆದರೂ ಘಟಕ ಕಾರ್ಯಾಚರಣೆ ನಡೆಸುತ್ತಿತ್ತು.

ಹಸಿರು ನ್ಯಾಯಾಧೀಕರಣ ತಡೆಯಾಜ್ಞೆ ನೀಡಿದ್ದರೂ, ಘಟಕ ಕಾರ್ಯನಿರ್ವಹಣೆ ಮಾಡುತ್ತಿದೆ ಎಂದು ಆರೋಪಿಸಿ ಜಯರಾಂಗೌಡ ಮತ್ತೆ ಹಸಿರು ನ್ಯಾಯಾಧೀಕರಣದಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ಅದರಂತೆ ಹಸಿರು ನ್ಯಾಯಾಧೀಕರಣದಲ್ಲಿ ಬಿಬಿಎಂಪಿ ವಿರುದ್ಧ ನ್ಯಾಯಾಂಗ ನಿಂದನೆ ಆರೋಪದಲ್ಲಿ ವಿಚಾರಣಾ ಪ್ರಕ್ರಿಯೆ ನಡೆದಿತ್ತು. ಇದನ್ನು ಪ್ರಶ್ನಿಸಿ ಬಿಬಿಎಂಪಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿತ್ತು.

ಬನಶಂಕರಿ 6ನೇ ಹಂತದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಪರಿಸರ ಇಲಾಖೆಯಿಂದ ಕಾನೂನುಬದ್ಧವಾಗಿ ಅನುಮತಿ ಪಡೆದುಕೊಳ್ಳಲಾಗಿದೆ. ಅಲ್ಲದೆ, ಹೈಕೋರ್ಟ್ ವಿಭಾಗೀಯ ಪೀಠದ ಆದೇಶದನ್ವಯ ಈ ಘಟಕ ಕಾರ್ಯಾಚರಣೆ ನಡೆಸುತ್ತಿದೆ ಎಂದು ಬಿಬಿಎಂಪಿ ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟಿತು. ಹೀಗಾಗಿ ಪ್ರಕರಣದ ವಿಚಾರಣೆ ಹೈಕೋರ್ಟ್‍ನಲ್ಲಿ ನಡೆಯುತ್ತಿರುವುದರಿಂದ ಹಸಿರು ನ್ಯಾಯಾಧೀಕರಣದ ವಿಚಾರಣೆಗೆ ಹಂಗಾಮಿ ಮುಖ್ಯನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯಪೀಠ ತಡೆಯಾಜ್ಞೆ ನೀಡಿತು.

SCROLL FOR NEXT