ಜಿಲ್ಲಾ ಸುದ್ದಿ

ಆಮದು ಸುಂಕ ಹೆಚ್ಚಳಕ್ಕೆ ಆಗ್ರಹ ರೇಷ್ಮೆ ಬೆಳೆಗಾರರ ಪ್ರತಿಭಟನೆ

Shilpa D

ಬೆಂಗಳೂರು: ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೇಷ್ಮೆ ಹಿತ ರಕ್ಷಣಾ ಹೋರಾಟ ಸಮಿತಿಯು ಮಂಗಳವಾರ ನಗರದಲ್ಲಿ ವಿಧಾನಸೌಧ ಚಲೋ ನಡೆಸಿತು.

ಸಮಿತಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಆಗಮಿಸಿದ ರೇಷ್ಮೆ ಸಚಿವ ಎ.ಮಂಜು, ರೇಷ್ಮೆ ಬೆಳೆಗಾರರ ಸಮಸ್ಯೆಯನ್ನು ಸರ್ಕಾರ ಪರಿಹರಿಸುವ ನಿಟ್ಟಿನಲ್ಲಿ ಜ.4ರಂದು ಬೆಳಗ್ಗೆ 11 ಗಂಟೆಗೆ ವಿಕಾಸಸೌಧದಲ್ಲಿ ಅಧಿಕಾರಿಗಳು ಮತ್ತು ರೈತರ ಸಭೆ ನಡೆಸಿ, ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು. ಚುನಾವಣಾ ನೀತಿ ಸಂಹಿತೆ ಇರುವುದರಿಂದ ಯಾವುದನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಪರಿಷತ್ ಚುನಾವಣೆ
ಮುಗಿದ ನಂತರ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸುತ್ತೇನೆ. ರೈತರಿಗೆ ಸಕರಾತ್ಮಕ ಫಲಿತಾಂಶ ದೊರೆಯಲಿದೆ ಎಂದು ತಿಳಿಸಿದರು.

ರೇಷ್ಮೆ ಬೆಳೆಗಾರರ ಹೋರಾಟ ಸಮಿತಿ ಸಂಘಟನಾ ಸಂಚಾಲಕ ಬಯ್ಯಾರೆಡ್ಡಿ, ಪ್ರತಿ ಕೆ.ಜಿ.ರೇಷ್ಮೆ ಗೂಡಿಗೆ 450 ರು. ಕನಿಷ್ಠ ಬೆಂಬಲ ಬೆಲೆ ನೀಡಬೇಕು. 8 ರಿಂದ 9 ತಿಂಗಳಿನಿಂದ ದರ ಕುಸಿತದಿಂದ ಆಗಿರುವ ಸುಮಾರು 500 ಕೋಟಿ ರು. ನಷ್ಟವನ್ನು ಕೊಡಬೇಕು. ಪ್ರಮುಖವಾಗಿ ರೇಷ್ಮೆ ಆಮದು ಸುಂಕವನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ, ಅದನ್ನು ಮತ್ತೆ ಶೇ.31ಕ್ಕೆ ಏರಿಸಬೇಕು. ರೀಲರ್ಸ್‍ಗಳು, ಮೊಟ್ಟೆ ಉತ್ಪಾದಕರು, ಚಾಕಿ ಕೇಂದ್ರಗಳ ಮಾಲೀಕರ ಸಮಸ್ಯೆಗಳನ್ನು ಇತ್ಯರ್ಥ ಮಾಡಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ರೇಷ್ಮೆ ಬೆಳೆಗಾರರ ಬಾಕಿ 65 ಕೋಟಿ ರು.ಗಳನ್ನು ಕೂಡಲೇ ಬಿಡುಗಡೆ ಮಾಡಬೇಕು. ತಜ್ಞರ ಸಮಿತಿ ಸಲ್ಲಿಸಿರುವ ಶಿಫಾರಸು ಅತ್ಯಂತ ಅವೈಜ್ಞಾನಿಕವಾಗಿದ್ದು, ವೈಜ್ಞಾನಿಕ ಉತ್ಪಾದನಾ ವೆಚ್ಚ ಎಂದು ಸಮಿತಿ ಹೇಳುವ ಉತ್ಪಾದನಾ ವೆಚ್ಚ ಹಾಗೂ ಡಾ ಎಂ.ಎಸ್.ಸ್ವಾಮಿನಾಥನ್ ಅವರ ವರದಿಯನ್ನು ತಪ್ಪಾಗಿ ವ್ಯಾಖ್ಯಾನ ಮಾಡಿ ನಿಗದಿ ಮಾಡಿರುವ ಲಾಭ ಎರಡು ಬೇಜವಾಬ್ದಾರಿಯಿಂದ ಕೂಡಿದೆ. ಇದನ್ನು ಸರ್ಕಾರ ತಿರಸ್ಕರಿಸಬೇಕು, ವರದಿಯಲ್ಲಿ ಆಗಿರುವ ದೋಷಗಳನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.


SCROLL FOR NEXT