ಜಿಲ್ಲಾ ಸುದ್ದಿ

ರೇಷ್ಮೆ ಬೆಳೆಗಾರರ ಅನುಕೂಲಕ್ಕೆ ಯತ್ನ

Manjula VN

ಬೆಂಗಳೂರು: ವಿದ್ಯಾರ್ಥಿ ಜೀವನದಲ್ಲಿ ನಾಯಕನಾಗಲು ಮುಂದಾದಾಗ ಬೆನ್ನ ಹಿಂದಿದ್ದ ಬಹುಸಂಖ್ಯಾತ ಜನರ ದಾಂಗುಡಿ, ಹಲವು ವರ್ಷಗಳ ಬಳಿಕ ನಾಯಕನಾಗಿ ರೂಪುಗೊಂಡು ವೇದಿಕೆಗೆ ಬಂದಾಗಲೂ ಅಷ್ಟೇ ಪ್ರಮಾಣದಲ್ಲಿದ್ದದನ್ನು ಕಂಡ ಆ ರಾಜಕೀಯ ವ್ಯಕ್ತಿಗೆ ಮಾತುಗಳು ಬರಲಿಲ್ಲ!

ಇಂತಹ ವಿಶೇಷ ಸನ್ನಿವೇಶ ಎದುರಿಸಿದ್ದು ಪಶುಸಂಗೋಪನಾ ಸಚಿವ ಎ. ಮಂಜು. ಬೆಂಗಳೂರಿನ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಓದುವ ಸಂದರ್ಭದಲ್ಲಿ ವಿದ್ಯಾರ್ಥಿ ಚಳವಳಿಗೆ ಧುಮುಕಿದಾಗ ಸಹಕರಿಸಿದ ಸಹಪಾಠಿಗಳು ಇಂದು ಸಚಿವರಾಗಿದ್ದಕ್ಕಾಗಿ ಸನ್ಮಾನ ಸಮಾರಂಭ ಏರ್ಪಡಿಸಿದ್ದರು. ಮಂಗಳವಾರ ನಗರದ ಸೆಂಟ್ರಲ್ ಕಾಲೇಜು ಜ್ಞಾನಜ್ಯೋತಿ ಸಭಾಂಗಣದಲ್ಲಿ ಕಾರ್ಯಕ್ರಮದಲ್ಲಿ ಸಚಿವರನ್ನು ಸಂಪಾದಿಸಿ ಕೆಲವು ಹಿತವಚನಗಳನ್ನು ಬೋಧಿಸಿದರು.

ಹಿತೈಷಿಗಳನ್ನು ಮಾತುಗಳನ್ನು ಸಂಯಮದಿಂದಲೇ ಆಲಿಸಿದ ಸಚಿವ ಮಂಜು ``ನಾನು ಸನ್ಮಾನ ಮಾಡಿಸಿಕೊಳ್ಳಲು ಇಲ್ಲಿಗೆ ಬಂದಿಲ್ಲ. ನಿಮ್ಮನ್ನೆಲ್ಲ ಭೇಟಿಯಾಗಲು ಬಂದಿದ್ದೇನೆ. ನಾನು ಬದಲಾಗಿದ್ದರೆ ಬೈದು ಬುದ್ದಿವಾದ ಹೇಳಿ. ಇದರ ಹೊರತಾಗಿಯೂ ತಾವು ಎಂದಿಗೂ ಬದಲಾಗುವುದಿಲ್ಲ'' ಎಂದು ಭರವಸೆ ನೀಡಿದರು. ``ತಾವು ಕಾಲೇಜಿನಲ್ಲಿ ಓದುವಾಗ ಸಹಕರಿಸಿದ ಹಾಸ್ಟೆಲ್‍ನ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳು, ನಾಯಕತ್ವ ಬೆಳೆಸಿದ ಕೆ.ಎಂ. ನಾಗರಾಜು ಹಾಗೂ ಸಹಪಾಠಿಗಳನ್ನು ನೆನೆಯುತ್ತೇನೆ.

ಕಾಲೇಜು ಹಂತದಲ್ಲಿಯೇ ಕೈಹಿಡಿದ ಪತ್ನಿ ತಾರಾಗೂ ಧನ್ಯವಾದವಿದೆ. ನಮ್ಮ ತಂದೆ ತಾಯಿಗೆ ನಾನು 18ನೇ ಮಗ. ಹುಟ್ಟಿದ್ದು ತಡವಾಗಿ, ಸಚಿವ ಸ್ಥಾನ ಪಡೆದಿದ್ದೂ ತಡವಾಗಿ. ಆದರೆ ಸಾಮಾಜಿಕ ನ್ಯಾಯದಡಿ ತಮಗೆ ಸಚಿವ ಸ್ಥಾನ ಸಿಕ್ಕಿದ್ದು ಈ ಹುದ್ದೆಯನ್ನು ಸಮರ್ಥವಾಗಿ ಬಳಸಿಕೊಳ್ಳುತ್ತೇನೆ. ರೈತ ಕುಟುಂಬದಿಂದ ಬಂದ ನನಗೆ ರೈತರ ಜತೆ ಕೆಲಸ ಮಾಡುವ ಖಾತೆಯೇ ಸಿಕ್ಕಿದೆ. ರೇಷ್ಮೆ ಬೆಳೆಗಾರರಿಗೆ ಅನುಕೂಲ ಮಾಡಿಕೊಡಲು ಪ್ರಯತ್ನಿಸುತ್ತೇನೆ'' ಎಂದು ತಮ್ಮ ಮುಂದಿನ ಗುರಿಯನ್ನು ಹೇಳಿಕೊಂಡರು.

SCROLL FOR NEXT