ಜಿಲ್ಲಾ ಸುದ್ದಿ

ಜನತಾ ಪರಿವಾರ ಒಗ್ಗೂಡಿಸಲು ಚರ್ಚೆ

Shilpa D

ಬೆಂಗಳೂರು: ಬಹು ದಿನಗಳ ನಂತರ ರಾಜ್ಯದಲ್ಲಿ ಮತ್ತೆ ಜನತಾ ಪರಿವಾರ ಒಗ್ಗೂಡಿಕೆಯ ಚರ್ಚೆ ಮುನ್ನೆಲೆಗೆ ಬಂದಿದೆ. ಆದರೆ, ಹಿಂದಿನ ಚರ್ಚೆಗಳಿಗಿಂತ ಈಗಿನ ಚರ್ಚೆ ಸ್ವಲ್ಪ ಭಿನ್ನವಾಗಿದೆ ಅಲ್ಲದೆ, ಗಂಭೀರವಾಗಿಯೂ ಇದೆ. ಜನತಾ ಪರಿವಾರದ ಹಿರಿಯರಾದ ಎಂ.ಸಿ.ನಾಣಯ್ಯ, ಎಂ.ಪಿ.ನಾಡಗೌಡ, ಬಸವರಾಜ ಹೊರಟ್ಟಿ ಸೇರಿದಂತೆ ಹಲವು ನಾಯಕರು ಗುರುವಾರ ಸಭೆ ನಡೆಸಿ ಪರಿವಾರ ಒಗ್ಗೂಡಿಸುವ ಚರ್ಚೆ ನಡೆಸಿದ್ದಾರೆ.

ಇತ್ತೀಚಿಗೆ ಬಿಹಾರ ಚುನಾವಣೆಯ ಮೈತ್ರಿ ಮತ್ತು ಫಲಿತಾಂಶ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಪರಿವಾರ ಒಂದಾಗುವ ಚರ್ಚೆಆರಂಭವಾಗಿದೆ. ರಾಜ್ಯದಲ್ಲೂ ಪರಿವಾರ ಒಂದಾಗಿ, ಆ ಮೂಲಕ ಪರ್ಯಾಶಕ್ತಿಯೊಂದು ಅಸ್ತಿತ್ವದಲ್ಲಿದೆ ಎಂದು ಸಂದೇಶ ರವಾನಿಸುವುದು ಈ ಸಭೆಯ ಉದ್ದೇಶ. ಜೆಡಿಎಸ್ ನಂಬಿದರೆ ಭವಿಷ್ಯ ಕಷ್ಟ. ಆದ್ದರಿಂದ ಹಳೇ ಬೇರುಗಳಿಗೆ ಶಕ್ತಿ ನೀಡಬೇಕೆನ್ನುವುದು ಸಭೆಯ ಒಳ ತಿರುಳು.

ನಗರದ ಡಾಲರ್ಸ್ ಕಾಲೋನಿಯಲ್ಲಿರುವ ಮಹಿಮಾ ಪಟೇಲ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಬಸವರಾಜ ಹೊರಟ್ಟಿ, ಡಾ.ಎಂ.ಪಿ.ನಾಡಗೌಡ, ಮಾಜಿ ಸಭಾಪತಿ ಎನ್.ತಿಪ್ಪಣ್ಣ, ಎಂ.ಸಿ.ನಾಣಯ್ಯ, ಮೈಕೆಲ್ ಫರ್ನಾಂಡೀಸ್, ಜೆಡಿಎಸ್‍ನ ಎಂ.ಶ್ರೀನಿವಾಸ್, ಅರವಿಂದ್ ದಳವಾಯಿ, ಆರ್‍ಜೆಡಿಯ ಯಾಖುಬ್, ಎನ್.ಎಸ್.ಕೇಡ್ ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

ಸಮಿತಿ ರಚನೆ : ಜನತಾ ಪರಿವಾರವನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಇದು ಪ್ರಯತ್ನವಾಗಿದ್ದು, ಇದಕ್ಕಾಗಿ ಒಂದು ಸಮಿತಿಯನ್ನೂ ರಚಿಸಲು ತೀರ್ಮಾನಿಸಲಾಗಿದೆ ಎಂದು ಮಾಜಿ ಸಚಿವ ಎಂ.ಸಿ.ನಾಣಯ್ಯ ತಿಳಿಸಿದ್ದಾರೆ. ಇದು ಯಾರ ಪರವಾಗಿಯೂ ಇಲ್ಲ. ವಿರೋಧವಾಗಿಯೂ ಇಲ್ಲ ಎಂದು ಶಾಸಕ ಬಿ.ಆರ್.ಪಾಟೀಲ್ ತಿಳಿಸಿದ್ದಾರೆ.

ಜನತಾಪರಿವಾರ ಒಂದಾಗುವುದಾದರೆ ಅದಕ್ಕೆ ನಮ್ಮ ಪಕ್ಷದ ಬೆಂಬಲವಿದೆ. ಪರಿವಾರ ಒಂದಾಗುವ ನಿಟ್ಟಿನಲ್ಲಿ ಅನೇಕ ಚರ್ಚೆಗಳು ನಡೆಯುತ್ತಿವೆ. ಮಹಿಮಾ ಪಟೇಲ್ ನಿವಾಸದಲ್ಲಿ ಸಭೆ ಬರೀ ತೋರಿಕೆಯ ಸಭೆ ಆಗಬಾರದು. ರಾಜ್ಯದ ಜನತೆಯ ಹಿತದೃಷ್ಟಿಯಿಂದ ಕಾಂಗ್ರೆಸ್ ಮತ್ತು ಬಿಜೆಪಿಗೆ ಒಂದು ಪರ್ಯಾಯ ಶಕ್ತಿ ಬರಬೇಕು.
ಎಚ್ ಡಿ ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷ

SCROLL FOR NEXT