ಬೆಂಗಳೂರು: ವಿಧಾನಪರಿಷತ್ತಿನ 25 ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ 4000 ಮತದಾರರಿಗೆ ಮತದಾನ ಹೇಗೆ ಮಾಡುವುದೇ ಗೊತ್ತಿಲ್ಲ! ಏಕೆಂದರೆ, ಇವರೆಲ್ಲಾ ಅನಕ್ಷರಸ್ಥ ಮತದಾರರು. ಇವರೀಗ ಮತ ಚಲಾಯಿಸಲು ಸಹಾಯಕರನ್ನು ಒದಗಿಸಬೇಕೆಂದು ತಮ್ಮ ಜಿಲ್ಲೆಗಳ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಇದನ್ನಾಧರಿಸಿ ಚುನಾವಣಾಧಿಕಾರಿಗಳು ಅನಕ್ಷರಸ್ಥ ಮತದಾರರ ದಾಖಲೆ, ಹಿನ್ನೆಲೆಗಳನ್ನುಪರಿಶೀಲಿಸುತ್ತಿದ್ದು, ಸದ್ಯ 4000 ಮತದಾರರನ್ನು ಅನಕ್ಷರಸ್ಥ ಮತದಾರರು ಎಂದು ಘೋಷಿಸಲಾಗಿದೆ.
ಅವರು ಮತದಾನಕ್ಕೆ ಸಹಾಯಕರನ್ನು ಕರೆತರಲು ಅವಕಾಶ ನೀಡಲಾಗಿದೆ. ಇನ್ನುಳಿದ ಮತದಾರರ ಅರ್ಜಿಗಳು ಪರಿಶೀಲನೆ ಇನ್ನೂ ನಡೆಯುತ್ತಿದೆ. ಅಂದ ಹಾಗೆ ಅನಕ್ಷರಸ್ಥರು ಎಂದು ಅರ್ಜಿ ಸಲ್ಲಿಸಿದ ಮಾತ್ರಕ್ಕೆ ಅವರಿಗೆ ಸಹಾಯಕರನ್ನು ನೀಡಲು ಅನುಮತಿ ನೀಡುವುದಿಲ್ಲ. ಮೊದಲು ಮತದಾರರು ಪಕ್ಕಾ ಅನಕ್ಷರಸ್ಥರೇ ಎನ್ನುವ ಬಗ್ಗೆ ಸ್ಥಳೀಯ ಸಂಸ್ಥೆಗಳ ಮುಖ್ಯ ಅಧಿಕಾರಿಯಿಂದ ಪ್ರಮಾಣ ಪತ್ರ ಸಿಗಬೇಕು.
ಅವರು ಅನಕ್ಷರಸ್ಥರು ಎನ್ನುವುದು ಸ್ಥಳೀಯ ಸಂಸ್ಥೆಗಳ ದಾಖಲೆ ಮತ್ತು ಸಭೆ ಚಟುವಟಿಕೆಗಳ ಮೂಲಕ ಸಾಬೀತಾಗಬೇಕು. ಅದನ್ನಾಧರಿಸಿ ಸ್ಥಳೀಯ ಸಂಸ್ಥೆಗಳ ಕಾರ್ಯಪಾಲಕ ಅಧಿಕಾರಿಗಳು ಪ್ರಮಾಣ ಪತ್ರಗಳನ್ನು ನೀಡಬೇಕು. ಇಂಥ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಒಟ್ಟಾರೆ 25ಕ್ಷೇತ್ರಗಳ 1,07ಲಕ್ಷ ಮತದಾರರ ಪೈಕಿ 8000 ಮಂದಿ ಅನಕ್ಷಸ್ಥರಾಗಿದ್ದೇವೆಂದು ಹೇಳಿಕೊಂಡಿದ್ದಾರೆ.
ಅಂದ ಮಾತ್ರಕ್ಕೆ ಇವರೆಲ್ಲರಿಗೂ ಮತದಾನಕ್ಕೆ ಸಹಾಯಕರು ಸಿಗುವ ಬಗ್ಗೆ ಖಾತರಿ ಇಲ್ಲ. ಅವರ ಸ್ಥಳೀಯ ಸಂಸ್ಥೆಗಳಲ್ಲಿ ಅವರು ಅನಕ್ಷರಸ್ತರು ಎನ್ನುವುದಕ್ಕೆ ದಾಖಲೆಗಳು ಸಿಗದಿದ್ದರೆ, ಸಹಾಯಕರು ಸಿಗುವುದಿಲ್ಲ. ಆಗ ಅನಕ್ಷರಸ್ಥ ಮತದಾರರು ಕಷ್ಟವಾದರೂ ಸರಿ ಮತದಾನ ಮಾಡುವುದು ಅನಿವಾರ್ಯ. ಪರಿಷತ್ ಚುನಾವಣೆಯಲ್ಲಿ ಪಟ್ಟಣ ಪಂಚಾಯಿತಿ, ನಗರಸಭೆ, ಪುರಸಭೆ, ಜಿಲ್ಲಾ, ತಾಲೂಕು ಮತ್ತು ಗ್ರಾಮಪಂಚಾಯಿತಿಗಳ ಸದಸ್ಯರು ಮತದಾನ ಮಾಡಬಹುದಾಗಿದೆ.
ಹೀಗೆ ಎಲ್ಲಾ ರೀತಿಯ ಸ್ಥಳೀಯ ಸಂಸ್ಥೆಗಳಿಂದ ಮತದಾನ ಮಾಡಲು ಅರ್ಹರಾದವರು 1,07,123 ಮಂದಿ ಇದ್ದಾರೆ. ಇವರೆಲ್ಲಾ ಪ್ರಾಶಸ್ತ್ಯ ಮಾದರಿಯ ಮತದಾನ ಮಾಡಬೇಕಿರುವುದರಿಂದ 1, 2ರಂತೆ ಕ್ರಮಸಂಖ್ಯೆಗಳನ್ನು ಬರೆಯುವ ಮೂಲಕ ಮತದಾನ ಮಾಡಬೇಕು. ಆದರೆ, 8000ಕ್ಕೂ ಹೆಚ್ಚು ಮತದಾರರಿಗೆ ಅದನ್ನೂ ಬರೆಯಲು ಬರುವುದಿಲ್ಲ. ಕೆಲವರಿಗೆ ಗೊತ್ತಿದ್ದರೂ ಗೊಂದಲವಿದೆ. ಆದ್ದರಿಂದ ಅನಕ್ಷರಸ್ಥರು ಮತದಾನಕ್ಕೆ ಸಹಾಯಕರನ್ನು ಪಡೆಯಲು ಅವಕಾಶವಿದೆ. ಈ ಬಗ್ಗೆ ಪ್ರಜಾಪ್ರತಿನಿಧಿ ಕಾಯ್ದೆಯಲ್ಲಿರುವ ಚುನಾವಣಾ ನಡೆಸುವ ನಿಯಮ 40(ಎ)ರಲ್ಲಿ ಸ್ಪಷ್ಟವಾಗಿ ಉಲ್ಲೇಖವಿದೆ. ಹೀಗಾಗಿ ಅನಕ್ಷರಸ್ಥ ಮತದಾರರು ಸಹಾಯಕರು ಬೇಕೆಂದು ಈಗಾಗಲೇ ಅರ್ಜಿ ಸಲ್ಲಿಸಿ ಅನುಮತಿಗೆ ಕಾಯುತ್ತಿದ್ದಾರೆ.
ಈ ಮತದಾರರು ತಮ್ಮ ಪಂಚಾಯಿತಿ ಅಥವಾ ಪುರಸಭೆಗಳ ಕಾರ್ಯದರ್ಶಿಗಳು ನೀಡುವ ಅನರಸ್ಥರು ಎಂಬ ಪ್ರಮಾಣ ಪತ್ರಗಳನ್ನು ತಮ್ಮ ಮತಗಟ್ಟೆ ಅಧಿಕಾರಿಗಳಿಗೆ ಸಲ್ಲಿಸಬೇಕು. ಆನಂತರ ಮತಪಟ್ಟಿಯಲ್ಲಿ ಅನಕ್ಷರಸ್ಥ ಮತದಾರರನ್ನು ಗುರುತು ಮಾಡಿಕೊಂಡು, ಸಹಾಯಕರೊಂದಿಗೆ ಮತ ಚಲಾಯಿಸಲು ಅವಕಾಶ ನೀಡಲಾಗುತ್ತದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.