ಬೆಂಗಳೂರು: ಭ್ರಷ್ಟರಿಗೆ ದುಸ್ವಪ್ನವಾಗಿದ್ದ ಲೋಕಾಯುಕ್ತ ಸಂಸ್ಥೆ ಮೈ ಕೊಡವಿ ಎದ್ದಿದೆ. ತಾನೇ ಭ್ರಷ್ಟಾಚಾರ ಆರೋಪ ಕೂಪದಲ್ಲಿ ಸಿಲುಕಿದ್ದ ಲೋಕಾಯುಕ್ತ ಇಂದು ಬೆಳಗ್ಗೆ ರಾಜ್ಯದ ಹಲವು ಕಡೆ ದಾಳಿ ನಡೆಸಿ ಕೋಟ್ಯಂತರ ರು. ಮೌಲ್ಯದ ಆಸ್ತಿಯ ಮೇಲೆ ದಾಳಿ ನಡೆಸಿದೆ.
ಹೊಸ ಮುಖ್ಯಸ್ಥರ ನೇಮಕಾತಿಯೊಂದಿಗೆ ಮತ್ತೆ ತನ್ನ ಶಕ್ತಿಯನ್ನು ಮೈಗೂಡಿಸಿಕೊಂಡಿರುವ ಲೋಕಾಯುಕ್ತ ಇಂದು ಬೆಳ್ಳಂಬೆಳಗ್ಗೆಯೇ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭ್ರಷ್ಟರ ಮೇಲೆ ವ್ಯಾಪಕ ದಾಳಿ ನಡೆಸಿದೆ.
ಮಾಜಿ ಸಚಿವ ಜನಾರ್ದನ ರೆಡ್ಡಿ ಬೆಂಗಳೂರು ಹಾಗೂ ಬಳ್ಳಾರಿಯ ನಿವಾಸ, ಗಣಿ ಕಂಪನಿ ಕಚೇರಿಗಳು ಸೇರಿದಂತೆ ರಾಜ್ಯದ ಹಲವಾರು ಕಡೆ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ ಮುಂದುವರೆದಿದೆ. ಆರು ಜಿಲ್ಲೆಗಳಲ್ಲಿ 11 ಕಡೆ ದಾಳಿಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ. ಬಳ್ಳಾರಿಯ ಸಿರಗುಪ್ಪ ರಸ್ತೆಯಲ್ಲಿರುವ ಜನಾರ್ದನ ರೆಡ್ಡಿ ಅವರ ನಿವಾಸ ಹಾಗೂ ಸಮಿಪದ ಓಎಂಸಿ ಗಣಿ ಕಂಪೆನಿ ಕಚೇರಿಗಳ ಮೇಲೆ ದಾಳಿ ನಡೆದಿದೆ ಎಂದು ಇದೀಗ ಬಂದ ವರದಿಗಳು ತಿಳಿಸಿವೆ.
ಬೀದರ್, ರಾಯಚೂರು, ವಿಜಯಾಪುರ, ಕಲಬುರಗಿ ಮತ್ತು ಕೋಲಾರದಲ್ಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಹಲವು ಮಹತ್ವ ದಾಖಲೆಗಳನ್ನು ಪರಿಶೀಲಿಸಿ ವಶ ಪಡಿಸಿಕೊಂಡಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಇನ್ನೂ ದಾಳಿ ಮುಂದುವರಿಸಿದ್ದಾರೆ.