ಜಿಲ್ಲಾ ಸುದ್ದಿ

ಅನೈತಿಕತೆಗೆ ಅಡ್ಡಿ: ಬಾಲಕಿಯ ಕೊಲೆ

Srinivas Rao BV

ಆನೇಕಲ್: ಪ್ರೇಯಸಿಯೊಡನೆ ಅನೈತಿಕ ಚಟುವಟಿಕೆಗೆ ಅಡ್ಡಿಪಡಿಸುತ್ತಾಳೆ ಎಂಬ ನೆಪದಿಂದ 5 ವರ್ಷದ ಬಾಲೆಯನ್ನು ಹೊಡೆದು ಹಿಂಸಿಸಿ ಆಕೆಯ ಸಾವಿಗೆ ಕಾರಣರಾದ ವ್ಯಕ್ತಿಗಳಿಬ್ಬರನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿ ನ್ಯಾಯಂಗ ವಶಕ್ಕೆ ಒಪ್ಪಿಸಿದ್ದಾರೆ.
ದಿವ್ಯಾ(5) ಮೃತ ಬಾಲಕಿ. ತಾಲೂಕಿನ ಮರಸೂರಿನ ಸತೀಶ್(35) ತನ್ನ ಪತ್ನಿಯಿಂದ ದೂರ ಉಳಿದು ಬೊಮ್ಮಸಂದ್ರದ ಕೈಗಾರಿಕಾ ಪ್ರದೇಶದ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ. ಅದೇ ಕಂಪನಿಯಲ್ಲಿ ಕೆಲಸದಲ್ಲಿದ್ದ ಕೊಳ್ಳೇಗಾಲದ ಶೋಭಾ (24) ಪತಿಯಿಂದ ಬೇರ್ಪಟ್ಟು ತನ್ನ ಮಗಳು ದಿವ್ಯ ಜೊತೆ ಕಿತ್ತಗಾನಹಳ್ಳಿಯಲ್ಲಿ 2 ವರ್ಷಗಳಿಂದ ವಾಸಿಸುತ್ತಿದ್ದರು.
ಈ ನಡುವೆ ಸತೀಶ್ ಮತ್ತು ಶೋಭಾ ನಡುವಿನ ಪರಿಚಯ ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಚಿಕ್ಕ ಮಗು ದಿವ್ಯ ಸತೀಶನ ವರ್ತನೆ ಯನ್ನು ಪ್ರಶ್ನಿಸಿದ ಕಾರಣ ತಮ್ಮ ಏಕಾಂತಕ್ಕೆ ಭಂಗವಾಗುತ್ತದೆಂದು ಹಲವಾರು ಸಲ ಮಗುವಿಗೆ ಹಿಂಸೆ ನೀಡಿದ್ದ. ಹೆತ್ತ ತಾಯಿ ಶೋಭಾ ಇದ್ದಕ್ಕೆ ಆಕ್ಷೇಪ ವ್ಯಕ್ತಪಡಿಸದೇಮಗಳನ್ನು ಹಿಂಸಿಸುವಾಗ ಪ್ರಿಯಕರನಿಗೆ ಸಹಕಾರ ನೀಡಿದ್ದಳು.
ಕಳೆದ ಅ.25ರಂದು ಸತೀಶ ಮಗುವನ್ನು ಹೊಡೆದು ಗೋಡೆಗೆ ಅಪ್ಪಳಿಸಿದ ಪರಿಣಾಮ ಮಗು ಪ್ರಜ್ಞೆ ತಪ್ಪಿದ್ದು, ಬೆಂಗಳೂರಿನ ಸೇಂಟ್ ಜಾನ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಪ್ರೇಮಿಗಳಿಬ್ಬರೂ ಮಗು ಕೆಳಗೆ ಬಿದ್ದು ಗಾಯಗೊಂಡಿದೆ ಎಂಬ ಕಾರಣ ನೀಡಿದ್ದು, 3 ದಿನಗಳ ನಂತರ ಮಗು ಮೃತಪಟ್ಟಿತ್ತು. ನಂತರ ಮಗುವಿನ ಅಂತ್ಯಕ್ರಿಯೆಯನ್ನೂ ಮಾಡಲಾಗಿತ್ತು.
ಮರಣೋತ್ತರ ವರದಿ: ಡಿ.28 ರಂದು ಮರಣೋತ್ತರ ವರದಿ ಬಂದಿದ್ದು, ಮಗುವಿನ ಮೇಲೆ ಸತತ ಹಲ್ಲೆ ಮಾಡಿದ ಕಾರಣ ಮೂಳೆಗಳು ಮುರಿದು, ಕರುಳು ಘಾಸಿಯಾಗಿರುವುದು ತಿಳಿದು ಬಂದಿತು. ನೆರೆಹೊರೆಯವರು ಅನುಮಾನ ವ್ಯಕ್ತಪಡಿಸಿದ್ದ ಕಾರಣ ತನಿಖೆಯನ್ನು ಚುರುಕುಗೊಳಿಸಿದ ಎಸ್ ಐ ಬಾಲಕೃಷ್ಣ ಮತ್ತು ಸಿಬ್ಬಂದಿ ಪ್ರೇಮಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಬಯಲಿಗೆ ಬಂದಿತು. ತನಿಖೆ ನಡೆಸಿ, ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ನೀಡಿದ್ದಾರೆ.
ಇಬ್ಬರನ್ನೂ ಆನೇಕಲ್ಲಿನ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿ ನ್ಯಾಯಂಗ ಬಂಧನ ಆದೇಶ ಅನುಸಾರ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಲಾಗಿದೆ ಎಂದು ಪಿಎಸ್ ಐ ತಿಳಿಸಿದರು.

SCROLL FOR NEXT