ಬೆಂಗಳೂರು: ಹಿಂದುಳಿದ ವರ್ಗಗಳಿಗೆ ಆರ್ಥಿಕ ಹಾಗೂ ಶೈಕ್ಷಣಿಕ ಮೀಸಲು ಜತೆಗೆ ರಾಜಕೀಯ ಕ್ಷೇತ್ರದಲ್ಲೂ ಮೀಸಲು ನೀಡಲು ಚಿಂತನೆ ನಡೆಸಲಾಗಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ.
ಬುಧವಾರ ಕೆಟಿಎಸ್‍ವಿ ರಾಜಾಜಿನಗರ ಪದವಿಪೂರ್ವ ಕಾಲೇಜಿನ ಬೆಳ್ಳಿಹಬ್ಬ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಹಿಂದುಳಿದ ಜನಾಂಗಗಳನ್ನು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಮೇಲಕ್ಕೆತ್ತಲು ಮೀಸಲು ನೀಡಲಾಗುತ್ತಿದೆ. ರಾಜಕೀಯ ಕ್ಷೇತ್ರದಲ್ಲೂ ಮೀಸಲು ನೀಡುವಂತೆ ಹಲವು ವರ್ಷಗಳ ಹಿಂದೆಯೇ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಆದರೆ ಸಮರ್ಪಕವಾಗಿ ಜಾರಿಗೆ ಬಂದಿರಲಿಲ್ಲ. ಹೀಗಾಗಿ ದೇಶದಲ್ಲೇ ಮೊದಲ ಬಾರಿಗೆ ಹಿಂದುಳಿದ ವರ್ಗಗಳಿಗೆ ರಾಜಕೀಯ ಕ್ಷೇತ್ರದಲ್ಲೂ ಮೀಸಲು ನೀಡಲು ರಾಜ್ಯ ಸರ್ಕಾರ ಚಿಂತಿಸಿದೆ.
ಹಿಂದುಳಿದ ಸಮುದಾಯದವರಿಗೆ ರಾಜಕೀಯ ಮೀಸಲು ನೀಡುವ ಸಂಬಂಧದ ಕಾನೂನಿಗೆ ಸೂಕ್ತ ಬದಲಾವಣೆ ತರಲಾಗುತ್ತದೆ. ಈ ಮೂಲಕ ಹಿಂದುಳಿದ ವರ್ಗದವರೂ
ರಾಜಕೀಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು ಸರ್ಕಾರ ಬದ್ಧವಿದೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೂ ಚರ್ಚಿಸಲಾಗಿದೆ ಎಂದು ಹೇಳಿದರು.
ಇನ್ನು ಶಿರಾ ತಾಲೂಕಿನಲ್ಲಿ ತಿಗಳರ ಸಮುದಾಯದವರೇ ಹೆಚ್ಚಿದ್ದಾರೆ. ಈ ಸಮಾಜದ ವಿದ್ಯಾರ್ಥಿಗಳಿಗೆ ಅನು ಕೂಲ ಮಾಡಿಕೊಡುವ ನಿಟ್ಟಿನಲ್ಲಿ ಶಿರಾ ಮುಖ್ಯರಸ್ತೆಯ ಪಕ್ಕದಲ್ಲಿ ತಿಗಳರ ಸಮುದಾಯ ನಿರ್ಮಿಸಲು ರು.80 ಲಕ್ಷ ಮೌಲ್ಯದ ಅರ್ಧ ಎಕರೆ ಜಮೀನನ್ನು ಈ ಸಮುದಾಯಕ್ಕೆ ನೀಡಲಾಗಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಉದ್ಯೋಗ ಸಿಗುವ ಕೋರ್ಸ್‍ಗಳನ್ನು ವಿದ್ಯಾರ್ಥಿ ಗಳು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡ ಹಲವು ಕೋರ್ಸ್ ತೆರೆಯಲು ಆಸಕ್ತಿ ತೋರಿದೆ. ಪಶುವೈದ್ಯಕೀಯ ಕೋರ್ಸ್‍ನಲ್ಲಿ ಡಿಪೊ್ಲಮಾ ಕೋರ್ಸ್ ತೆರೆದಂತೆ ತೋಟಗಾರಿಕಾ ಕೋರ್ಸ್‍ನಲ್ಲೂ 1 ವರ್ಷದ ಡಿಪೊ್ಲಮಾ ಕೋರ್ಸ್ ತೆರೆಯಬೇಕು. ಇದರಿಂದ ರೈತರ ಮಕ್ಕಳು ಇದರ ಲಾಭ ಪಡೆದುಕೊಂಡು ಕೃಷಿಯಲ್ಲಿ ಮುಂದುವರಿಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಾರ್ತಾ ಸಚಿವ ಆರ್.ರೋಷನ್‍ಬೇಗ್, ಮಾಜಿ ಶಾಸಕ ನೆ.ಲ. ನರೇಂದ್ರ ಬಾಬು, ಕೆಟಿಎಸ್‍ವಿ ಸಂಘದ ಅಧ್ಯಕ್ಷ ಎಸ್. ಸಿದ್ದಗಂಗಯ್ಯ ಬಿಬಿಎಂಪಿ ಸದಸ್ಯೆ ದೀಪಾ ನಾಗೇಶ್ ಉಪಸ್ಥಿತರಿದ್ದರು.