ಜಿಲ್ಲಾ ಸುದ್ದಿ

ಅತ್ಯಾಚಾರ ಸಂತ್ರಸ್ತರಿಗೆ ಪರಿಹಾರ: ಹೈ ಆದೇಶ

ಬೆಂಗಳೂರು: ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತರು ದಾಖಲಿಸುವ ಎಫ್ಐಆರ್, ವೈದ್ಯಕೀಯ ವರದಿ ಇನ್ನಿತರೆ ಅಗತ್ಯ ಮಾಹಿತಿಗಳನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಪರಿಶೀಲಿಸಿ ಪರಿಹಾರ ಧನ ವಿತರಿಸಬೇಕೆಂದು ಹೈಕೋರ್ಟ್ ಆದೇಶಿಸಿದೆ.

ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣದ ವರದಿ ಆಧಾರದ ಮೇಲೆ ಮಹಿಳಾ ವಕೀಲರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಡಿ.ಎಚ್. ವಘೇಲಾ, ನ್ಯಾ.ಅಶೋಕ್ ಬಿ ಹಿಂಚಗೇರಿ ಅವರಿದ್ದ ವಿಭಾಗೀಯ ಪೀಠ, ಈ ಆದೇಶ ನೀಡಿ ಅರ್ಜಿ ಇತ್ಯರ್ಥಪಡಿಸಿದೆ.

ವಿಚಾರಣೆ ವೇಳೆ ಸರ್ಕಾರಿ ವಕೀಲರು, ಈ ಹಿಂದೆ ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತೆಯರಿಗೆ ಸರ್ಕಾರ ರು. 50 ಸಾವಿರ ಹಾಗೂ ವಯಸ್ಕಿರಿಗೆ ರು. 40 ಸಾವಿರ ಪರಿಹಾರ ಧನ ನೀಡುತ್ತಿತ್ತು. ಸದ್ಯ ಸರ್ಕಾರ ಅದರ ಮೊತ್ತ ವನ್ನು ಅಪ್ರಾಪ್ತೆಯರಿಗೆ ರು. 3 ಲಕ್ಷ ಹಾಗೂ ವಯಸ್ಕರಿಗೆ ರು. 1.5 ಲಕ್ಷಕ್ಕೆ ಏರಿಸಿರುವುದಾಗಿ ನ್ಯಾಯಪೀಠದ ಗಮನಕ್ಕೆ ತಂದಿತು. 2014ರ ಅಂತ್ಯದ ಮಾಹಿತಿ ಪ್ರಕಾರ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಅತ್ಯಾಚಾರಕ್ಕೆ ಒಳಗಾದ ಒಟ್ಟು 66 ಸಂತ್ರಸ್ಥರ ವರದಿ ದಾಖಲಾಗಿದ್ದು, 45 ಮಂದಿಗೆ ಪರಿಹಾರ ನೀಡಿರುವುದಾಗಿ ನ್ಯಾಯಪೀಠಕ್ಕೆ ತಿಳಿಸಿತು. ಒಟ್ಟಾರೆ 2014-2015ರ ಅವಧಿಗೆ ಕಾನೂನು ಸೇವೆಗಳ ಪ್ರಾ„ಕಾರಕ್ಕೆ ಬಿಡುಗಡೆಯಾಗಿದ್ದ ರು.75 ಲಕ್ಷದಲ್ಲಿ ಈಗಾಗಲೇ ರು. 64.96ಲಕ್ಷ ಪರಿಹಾರದ ರೂಪದಲ್ಲಿ ಹಂಚಲಾಗಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮಾಹಿತಿಯನ್ನು ಪೀಠದ ಗಮನಕ್ಕೆ ತಂದಿತು.

ರಾಜ್ಯದಲ್ಲಿ ಒಂದೇ ದಿನ ಸುಮಾರು 10 ಅತ್ಯಾಚಾರ ಪ್ರಕರಣ ದಾಖಲಾಗಿರುವುದಾಗಿ ವರದಿ ಪ್ರಸಾರವಾಗಿತ್ತು. ಈ ವರದಿ ಆಧಾರದ ಮೇಲೆ ಮಹಿಳಾ ವಕೀಲರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು.

SCROLL FOR NEXT