ಜಿಲ್ಲಾ ಸುದ್ದಿ

ಕೆಎಂಎಫ್: ಜಯರಾಮ್ ನೇಮಕಕ್ಕೆ ತಡೆ

ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ವ್ಯವಸ್ಥಾಪಕ ನಿರ್ದೇಶಕರ ಸ್ಥಾನಕ್ಕೆ ಐಎಎಸ್ ಅಧಿಕಾರಿ ಎಸ್.ಎನ್. ಜಯರಾಮ್  ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶಕ್ಕೆ ಹೈಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.

ಜಯರಾಮ್ ಅವರ ನೇಮಕ ಪ್ರಶ್ನಿಸಿ ಐ.ಆರ್. ರಾಮಲಿಂಗೇಗೌಡ ತಕರಾರು ಅರ್ಜಿ ದಾಖಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ.ಹುಲುವಾಡಿ ಜಿ ರಮೇಶ್ ಅವರ ಪೀಠ,
ಜಯರಾಮ್, ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಹಕಾರ ಇಲಾಖೆ ಕಾರ್ಯದರ್ಶಿ ಮತ್ತು ಸಹಕಾರ ಇಲಾಖೆ ರಿಜಿಸ್ಟ್ರಾರ್ ಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.

ಏನಿದು ವಿವಾದ?

ರಾಮಲಿಂಗೇಗೌಡ ಅವರನ್ನು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರವು 2007ರ ಏ.30ರಂದು ಆದೇಶಿಸಿತ್ತು. ನಂತರ 2011ರ ಜು.27ರಂದು ಅವರ ನೇಮಕ ಅಮಾನತಿನಲ್ಲಿಡ ಲಾಗಿತ್ತು. ಹಾಗೆಯೇ,  ಅಂದೇ ಎ.ಎಸ್.ಪ್ರೇಮನಾಥ್ ಅವರನ್ನು ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ನೇಮಕ ಮಾಡಲಾಗಿತ್ತು. ನಂತರ 2014ರ ನ.25ರಂದು ರಾಮಲಿಂಗೇ ಗೌಡ ಅವರ ಅಮಾನತು ಆದೇಶ ರದ್ದುಪಡಿಸಿತ್ತು.

ಈ ಆಧಾರದ ಮೇಲೆ ಕೆಎಂಎಫ್ ಆಡಳಿತ ಮಂಡಳಿ 2014ರ ಡಿ.22ರಂದು ರಾಮಲಿಂಗೇ ಗೌಡ ಅವರನ್ನು ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ಪುನರ್ ನೇಮಕ ಮಾಡಲು ನಿರ್ಣಯ ಕೈಗೊಂಡಿತ್ತು. ಜನವರಿ 31 ರಂದು ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಿಂದ ಪ್ರೇಮನಾಥ್ ಅವರು ನಿವೃತ್ತಿ ಹೊಂದಿದ ಬೆನ್ನಲ್ಲೇ, ಆ ಸ್ಥಾನಕ್ಕೆ ರಾಮ ಲಿಂಗೇಗೌಡ ಅವರನ್ನು ನೇಮಕ ಮಾಡಿ ಕೆಎಂಎಫ್ ಅಧ್ಯಕ್ಷರು ಆದೇಶಿಸಿದ್ದರು. ಫೆ.1 ರಂದು ರಾಮಲಿಂಗೇಗೌಡ ಅವರು ಅಧಿಕಾರ ಸ್ವೀಕರಿಸುವುದಾಗಿ ಕೆಎಂಎಫ್ ಪ್ರಕಟಣೆ ಹೊರಡಿಸಿತ್ತು. ಈ ನಡುವೆ ರಾಜ್ಯ ಸರ್ಕಾರವು ಐಎಎಸ್ ಅಧಿಕಾರಿ ಎಸ್.ಎನ್. ಜಯರಾಮ್  ಅವರನ್ನ ಎಂಡಿ ಸ್ಥಾನಕ್ಕೆ ನೇಮಕ ಮಾಡಿ ಆದೇಶಿಸಿತ್ತು. ಅವರೂ ಸಹ ಅಧಿಕಾರ ಸ್ವೀಕರಿಸಿದ್ದರು. ಈ ಹಿನ್ನೆಲೆಯಲ್ಲಿ ಜಯರಾಮ್ ಅವರ ನೇಮಕ ಪ್ರಶ್ನಿಸಿ ರಾಮಲಿಂಗೇಗೌಡ ಅವರು ಹೈಕೋರ್ಟ್‍ಗೆ ತಕರಾರು ಅರ್ಜಿ ಸಲ್ಲಿಸಿದ್ದಾರೆ.

SCROLL FOR NEXT