ಜಿಲ್ಲಾ ಸುದ್ದಿ

ಮೆಜೆಸ್ಟಿಕ್‍ನಿಂದ ಮೆಟ್ರೋ ರೈಲು ನವೆಂಬರ್ ವೇಳೆಗೆ

ನಗರದ ಜನತೆ ನವೆಂಬರ್ ವೇಳೆಗೆ ಮೆಜೆಸ್ಟಿಕ್‍ನಿಂದಲೇ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಬಹುದು...

ಬೆಂಗಳೂರು: ನಗರದ ಜನತೆ ನವೆಂಬರ್ ವೇಳೆಗೆ ಮೆಜೆಸ್ಟಿಕ್‍ನಿಂದಲೇ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಬಹುದು ಎಂದು ಬಿಎಂಆರ್‍ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‍ಸಿಂಗ್ ಖರೋಲ ಹೇಳಿದ್ದಾರೆ.

ಮೆಟ್ರೋ ಪ್ರಥಮ ಹಂತದ ಎಲ್ಲ ಕಾಮಗಾರಿಗಳು ನವೆಂಬರ್ ವೇಳೆಗೆ ಮುಗಿಯಲಿದ್ದು, ಆನಂತರ ಆರಂಭಿಕ ಹಂತದ ಎಲ್ಲ ಮಾರ್ಗಗಳಲ್ಲೂ ಜನರು ಮೆಟ್ರೋ ರೈಲಿನಲ್ಲೇ ಪ್ರಯಾಣಿಸಬಹುದು ಎಂದು ಅವರು ಸೋಮವಾರ ಎಫ್ ಕೆಸಿಸಿಐನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ತಿಳಿಸಿದರು.

ಈಸ್ಟ್‍ವೆಸ್ಟ್ ಕಾರಿಡಾರ್‍ನಲ್ಲಿ (ಬಯ್ಯಪ್ಪನಹಳ್ಳಿಯಿಂದ ಮೈಸೂರು ರಸ್ತೆ ಮಾರ್ಗ) ಜೂನ್ ವೇಳೆಗೆ ಪರೀಕ್ಷಾರ್ಥ ಸಂಚಾರ ನಡೆಯಲಿದ್ದು, ನವೆಂಬರ್ ವೇಳೆಗೆ ಪ್ರಯಾಣಿಕರ ಸಂಚಾರ ಆರಂಭವಾಗಲಿದೆ. ಅದೇರೀತಿ ನಾರ್ತ್ ಸೌತ್ ಕಾರಿಡಾರ್ (ಪೀಣ್ಯದಿಂದ ಮೆಜೆಸ್ಟಿಕ್)ಕೂಡ ನವೆಂಬರ್ ಡಿಸೆಂಬರ್ ವೇಳೆಗೆ ಸಂಚಾರಕ್ಕೆ ಮುಕ್ತವಾಗುತ್ತದೆ ಎಂದರು. ಮೆಟ್ರೋದ ಪ್ರಥಮ ಹಂತದ ಯೋಜನೆಯಲ್ಲಿ ನಗರದ ಕೇಂದ್ರ ಭಾಗಕ್ಕೆ ಸೌಲಭ್ಯ ಒದಗಿಸಲಾಗುತ್ತಿದ್ದು, ಎರಡನೇ ಹಂತದಲ್ಲಿ ನಗರ ಕೇಂದ್ರದಿಂದ ಹೊರಗಿನ ಪ್ರದೇಶಗಳಿಗೆ ಸೌಲಭ್ಯ ಕಲ್ಪಿಸಲಾಗುತ್ತದೆ. ಈ ಕಾಮಗಾರಿಗಳಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಇನ್ನು ಮೂರು ತಿಂಗಳಲ್ಲಿ ಕಾಮಗಾರಿಗಳು ಆರಂಭವಾಗಲಿವೆ.

ಯೋಜನೆಯ ಮೂರನೇ ಹಂತದಲ್ಲಿ ದೇವನಹಳ್ಳಿ ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೂ ಮೆಟ್ರೋ ರೈಲು ಸಂಪರ್ಕ ಕಲ್ಪಿಸುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ಹೇಳಿದರು. ವಿಜಯನಗರದಿಂದ ಮೆಟ್ರೋ ಸಂಚಾರ: ರೀಚ್ 2ರ ಮಾರ್ಗವಾದ ಮಾಗಡಿ ರಸ್ತೆ- ಮೈಸೂರು ರಸ್ತೆ ಕಾಮಗಾರಿ ಬಹುತೇಕ ಮುಗಿದಿದ್ದು, ಈ ತಿಂಗಳ ಕೊನೆಯಲ್ಲಿ ವಿಜಯನಗರ ನಿಲ್ದಾಣದಲ್ಲಿ ಮೆಟ್ರೋ ರೈಲು ಸಂಚಾರ ಆರಂಭಿಸಲಿದೆ. ಆದರೆ, ರೀಚ್ 3ರಲ್ಲಿ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದ್ದು, ಇದರಲ್ಲಿ 70 ಟನ್ ತೂಕದ ರಾಕ್ ಕಟ್ಟಿಂಗ್ ಯಂತ್ರವೊಂದು ಅರ್ಧಕ್ಕೆ ಮುರಿದಿದೆ. ಇದನ್ನು ಹೊರ ತೆಗೆಯುವುದು ಕೂಡ ಕಷ್ಟವಾಗಿದೆ. ಆದ್ದರಿಂದ ಹೊಸ ಯಂತ್ರವನ್ನು ತರುವುದಕ್ಕೆ ವ್ಯವಸ್ಥೆ ಮಾಡಲಾಗಿದೆ.

ಮೊದಲ ಹಂತದ ಎಲ್ಲಾ ಕಾಮಗಾರಿಗಳಲ್ಲೂ ಹೆಚ್ಚು ತೊಂದರೆ ನೀಡಿದ್ದೇ ಚಿಕ್ಕಪೇಟೆ ಮಾರ್ಗ. ಯೋಜನೆಯ 2ನೇ ಹಂತದ ಕಾಮಗಾರಿಗಳಲ್ಲಿ ಇಷ್ಟು ಕಷ್ಟ ಇರುವುದಿಲ್ಲ. ಕಾಮಗಾರಿಗಳೂ ವಿಳಂಬವಾಗುವುದಿಲ್ಲ. ಏಕೆಂದರೆ, ಎರಡನೇ ಹಂತದ ಯೋಜನೆಗಳು ನಗರದಿಂದ ಹೊರಗಿವೆ. ಜತೆಗೆ ಸುರಂಗ ಮಾರ್ಗ ಕೂಡ ತುಂಬಾ ಕಡಿಮೆ. ಹೀಗಾಗಿ ಯೋಜನೆ ಕಾಲಮಿತಿಯಲ್ಲೇ ಮುಗಿಯುತ್ತದೆ ಎಂದು ಖರೋಲ ವಿವರಿಸಿದರು.

ಎಲ್ಲೆಡೆ ಮೆಟ್ರೋ ಕಾಮಗಾರಿಯ ಅವಶೇಷ ಕಾಣಸಿಗುತ್ತಿದ್ದು, ಇದನ್ನು ತೆರವುಗೊಳಿಸಿ ರಸ್ತೆ ವಿಭಜಕಗಳನ್ನು ಹಾಕಲು ತೀರ್ಮಾನಿಸಲಾಗಿದೆ. ಈ ಹೊಣೆಯನ್ನು ಖಾಸಗಿಗೆ ವಹಿಸಿ, ಅವರಿಂದ ಹಣವನ್ನೂ ವಸೂಲಿ ಮಾಡಲಾಗುತ್ತದೆ. ಆದ್ದರಿಂದ ಮೆಟ್ರೋ ಸುತ್ತಮುತ್ತಲ ರಸ್ತೆಗಳ ವಿಭಜಕಗಳು ಇನ್ನುಮುಂದೆ ಹಸಿರಿನಿಂದ ಕಂಗೊಳಿಸುತ್ತದೆ ಎಂದು ಖರೋಲ ಹೇಳಿದರು.

ನ್ಯಾಷನಲ್ ಕಾಲೇಜು- ಕೆಆರ್ ಮಾರುಕಟ್ಟೆ- ಚಿಕ್ಕಪೇಟೆ ಮಾರ್ಗ ತುಂಬಾ ಹಳೇ ಪ್ರದೇಶ ಹಾಗೂ ಹೆಚ್ಚು ಜನಸಾಂದ್ರತೆ ಇರುವ ಸ್ಥಳವಾಗಿರುವುದರಿಂದ ತುಂಬಾ ಸೂಕ್ಷ್ಮವಾಗಿ ಕಾಮಗಾರಿ ನಡೆಸಲಾಗುತ್ತಿದೆ. ಆದ್ದರಿಂದ ಈ ಮಾರ್ಗ ಡಿಸೆಂಬರ್ ವೇಳೆಗೆ ಪೂರ್ಣಗೊಳ್ಳುತ್ತದೆ ಎಂದು ತಿಳಿಸಿದರು. ಎಫ್ ಕೆಸಿಸಿಐ ಅಧ್ಯಕ್ಷ ಎಸ್.ಸಂಪತ್‍ರಾಮನ್, ಉಪಾಧ್ಯಕ್ಷ ತಲ್ಲಮ್ ದ್ವಾರಕನಾಥ್, ಪ್ರವಾಸ ಸಮಿತಿಯ ಬಿ.ಅಮರನಾಥ್ ಹಾಜರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

SCO Summit: ಒಂದೇ ವೇದಿಕೆಯಲ್ಲಿ ಚೀನಾ- ಭಾರತ- ರಷ್ಯಾ; ಕೆರಳಿದ Trump ಭಾರತದ ಬಗ್ಗೆ ಹೇಳಿದ್ದೇನು?

ಎಲ್ಲರನ್ನೂ ಕಾಯಿಸುತ್ತಿದ್ದ ಪುಟಿನ್ ಪ್ರಧಾನಿ ಮೋದಿಗಾಗಿ 10 ನಿಮಿಷಗಳ ಕಾಲ ಕಾರಿನಲ್ಲಿ ಕಾದು ಕುಳಿತ್ತಿದ್ದರು, Video!

ಧರ್ಮಸ್ಥಳದ ವಿರುದ್ಧ ಬಿಜೆಪಿಯಿಂದಲೇ ಷಡ್ಯಂತ್ರ: ಡಿಕೆ ಶಿವಕುಮಾರ್

ಸರ್ಕಾರಿ ಬಂಗಲೆ ಖಾಲಿ ಮಾಡಿದ ಮಾಜಿ ಉಪರಾಷ್ಟ್ರಪತಿ ಜಗದೀಪ್ ಧಂಖರ್!

ಸೌಜನ್ಯ ಹೆಸರು ಹೇಳಿ ದುಡ್ಡು ಮಾಡಿದೆ ಎಂದು ನಿಮ್ಮ ಪಕ್ಷದವರೇ ಟೀಕಿಸಿದರು: ವಿಜಯೇಂದ್ರಗೆ ಸೌಜನ್ಯ ತಾಯಿ ತರಾಟೆ

SCROLL FOR NEXT