ಜಿಲ್ಲಾ ಸುದ್ದಿ

ಹೊಯ್ಸಳರ ಕಾಲದ ದೇಗುಲ, ಹಳೆಗನ್ನಡ ಶಾಸನ ಪತ್ತೆ

Mainashree

ಕೆ.ಆರ್.ಪೇಟೆ: ತಾಲೂಕಿನ ವಳಗೆರೆ ಮೆಣಸ ಗ್ರಾಮದ ಕೆರೆಯ ಕೋಡಿ ಬಳಿ ಮಣ್ಣಿನಲ್ಲಿ ಮುಚ್ಚಿಹೋಗಿದ್ದ ಹೊಯ್ಸಳರ ಕಾಲದ ಶಿಲ್ಪಕಲೆಯುಳ್ಳ ನಕ್ಷತ್ರಾಕಾರದ ದೇವಾಲಯ ಮತ್ತು ಹಳೆಗನ್ನಡದ ಶಾಸನ ಪತ್ತೆಯಾಗಿದೆ.

ಸುಮಾರು 12ನೇ ಶತಮಾನದಲ್ಲಿ ನಿರ್ಮಾಣವಾಗಿರುವ ದೇವಾಲಯವು ಸುಮಾರು 30 ಅಡಿ ಉದ್ದ ಮತ್ತು 15 ಅಡಿ ಎತ್ತರವಿರುವ ನಕ್ಷತ್ರಾಕಾರದಲ್ಲಿ ಪೂರ್ವಾಭಿಮುಖವಾಗಿ ನಿರ್ಮಿಸಲಾಗಿದೆ. ಇದನ್ನು ಹೊಯ್ಸಳರ ದೊರೆಗಳು ನಿರ್ಮಿಸಿದ್ದಾರೆ ಎನ್ನಲಾಗಿದೆ.

ದೇವಾಲಯದ ಒಳಭಾಗದಲ್ಲಿ ಸುಂದರ ಕೆತ್ತನೆಯುಳ್ಳ ಚಾವಣಿ ಇದೆ. ಆವರಣದಲ್ಲಿ ಎಂಟು ಅದ್ಭುತ ಕೆತ್ತನೆಯ ಕಲ್ಲಿನ ಕಂಬಗಳಿವೆ. ಗರ್ಭಗುಡಿಯಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿದ್ದ ಬಗ್ಗೆ ಗುರುಹುಗಳಿವೆ.

ದ್ವಾರದ ಹೊರಗೆ ಹಳೆಗನ್ನಡದಲ್ಲಿ ಶ್ರೀ ಕಾಶಿ ಏಕನಾಥೇಶ್ವರ ಗುಡಿ ಎಂದು ಕೆತ್ತಿರುವ ಬರಹ ಇದೆ. ಬಲಭಾಗದಲ್ಲಿ ಸುಮಾರು 4 ಅಡಿ ಎತ್ತರ ಮತ್ತು 3 ಅಡಿ ಅಗಲ ಇರುವ ವೀರಗಲ್ಲು ಇದೆ. ಅದರಲ್ಲಿ ಹಳೆಗನ್ನಡ ಶಾಸನ ದೊರೆತಿದೆ.

ಪತ್ತೆಯಾಗಿದ್ದೇಗೆ?: ಕೆರೆಕೋಡಿ ಮಧ್ಯೆ ಇರುವ ಈ ದೇವಾಲಯ ಸುತ್ತಲೂ ಗಿಡ ಗಂಟೆಗಳು ಬೆಳೆದುಕೊಂಡಿದ್ದವು. ದೇವಸ್ಥಾನ ಸಂಪೂರ್ಣ ಮಣ್ಣಿನಿಂದ ಮುಚ್ಚಿಹೋಗಿತ್ತು. ದೇವಸ್ಥಾನದ ಬಳಿ ಇದ್ದ ಮರವೊಂದರಲ್ಲಿ ಮೇಕೆಗೆ ಮೇವು ತರಲೆಂದು ವಳಗೆರೆಮೆಣಸ ಗ್ರಾಮದ ಜವರೇಗೌಡ ಎಂಬುವರ ಹೋಗಿದ್ದಾಗ ದೇವಾಲಯದ ಕುರುಹು ಸಿಕ್ಕಿದೆ. ಗ್ರಾಮಸ್ಥರಿಗೆ ವಿಷಯ ತಿಳಿದು ಮಣ್ಣನ್ನು ಅಗೆದಾಗ ದೇವಾಲಯ ಪತ್ತೆಯಾಗಿದೆ.



SCROLL FOR NEXT