ಜಿಲ್ಲಾ ಸುದ್ದಿ

ರಾಘವೇಶ್ವರ ಶ್ರೀಗಳ ಮೇಲ್ಮನವಿ ವಜಾ

Srinivasamurthy VN

ಬೆಂಗಳೂರು: ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದು ಮಾಡು­ವಂತೆ ಕೋರಿ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಹೈಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಸೋಮವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಆನಂದ ಭೈರಾರೆಡ್ಡಿ ಮತ್ತು ಎನ್‌. ಆನಂದ್‌ ಅವರ ನೇತೃತ್ವದ ವಿಭಾಗೀಯ ಪೀಠ, ತಾಂತ್ರಿಕ ಕಾರಗಳಿಂದಾಗಿ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಕ್ರಿಮಿನಲ್ ಪ್ರಕರಣದಲ್ಲಿ ರಿಟ್ ಅಥವಾ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿದೆ.

ತಾಂತ್ರಿಕ ಕಾರಣಗಳಿಂದಾಗಿ ಅರ್ಜಿಯನ್ನು ವಜಾಗೊಳಿಸಲಾಗುತ್ತಿದೆ. ಮೇಲ್ಮನವಿ ಸಲ್ಲಿಸಿರುವುದಕ್ಕಾಗಿ ದಂಡ ವಿಧಿಸಬಹುದು. ಆದರೆ, ಸ್ವಾಮೀಜಿಗಳ ಪ್ರಕರಣವಾದ್ದರಿಂದ ದಂಡ ವಿಧಿಸುತ್ತಿಲ್ಲ. ಸ್ವಾಮೀಜಿಗಳ ಬಳಿ ವೈಯಕ್ತಿಕವಾದ ಹಣವಿರುವುದಿಲ್ಲ. ಮಠದ ಆಸ್ತಿಯಿಂದ ದಂಡದ ಮೊತ್ತವನ್ನು ಪಾವತಿ ಮಾಡಬೇಕಾಗುತ್ತದೆ. ಆದ್ದರಿಂದ ಮೇಲ್ಮನವಿ ಸಲ್ಲಿಸಿರುವುದಕ್ಕೆ ದಂಡ ವಿಧಿಸುತ್ತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಲ್ಲದೆ ರಿಟ್ ಅಥವಾ ಮೇಲ್ಮನವಿ ಸಲ್ಲಿಸಲು ಕೂಡ ಅವಕಾಶವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ರಾಮಕಥಾ ಗಾಯಕಿ ಪ್ರೇಮಲತಾ ಮೇಲೆ ಅತ್ಯಾಚಾರ ನಡೆಸಿದ ಆರೋಪವನ್ನು ರಾಘವೇಶ್ವರ ಶ್ರೀಗಳು ಎದುರಿಸುತ್ತಿದ್ದು, ಈ ಪ್ರಕರಣವನ್ನು ರದ್ದುಗೊಳಿಸುವಂತೆ ಶ್ರೀಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ನ್ಯಾ. ಕೆ.ಎನ್ ಫಣೀಂದ್ರ ಅವರು ಈ ಹಿಂದೆ ವಜಾಗೊಳಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ರಾಘವೇಶ್ವರ ಶ್ರೀಗಳು ಮತ್ತೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯಿಂದ ಈ ಹಿಂದಿನ ಐವರು ನ್ಯಾಯಮೂರ್ತಿಗಳು ವಿವಿಧ ಕಾರಣಗಳಿಗಾಗಿ ಹಿಂದೆ ಸರಿದಿದ್ದರು.ಹೀಗಾಗಿ ನ್ಯಾಯಾಲಯಲ ಹೊಸ ಪೀಠವನ್ನು ರಚಿಸಿ ವಿಚಾರಣೆಗೆ ಸೂಚನೆ ನೀಡಿತ್ತು.

SCROLL FOR NEXT