ಜಿಲ್ಲಾ ಸುದ್ದಿ

ತಾಂತ್ರಿಕ ಕಾರಣದಿಂದಾಗಿ ರಾಘವೇಶ್ವರ ಶ್ರೀ ಅರ್ಜಿ ವಜಾ

Mainashree

ಬೆಂಗಳೂರು: ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಶ್ರೀಗಳ ವಿರುದ್ಧ ದಾಖಲಾಗಿದ್ದ ಅತ್ಯಾಚಾರ ಆರೋಪ ಪ್ರಕರಣ ರದ್ದುಗೊಳಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್ ತಾಂತ್ರಿಕ ಕಾರಣಗಳಿಗಾಗಿ ವಜಾಗೊಳಿಸಿದೆ.

ಮೇಲ್ಮನವಿ ಅರ್ಜಿ ವಿಚಾರಣೆಗೆಂದೇ ನ್ಯಾ. ಆನಂದ ಬೈರಾ ರೆಡ್ಡಿ ಮತ್ತು ನ್ಯಾ.ಎನ್.ಆನಂದ್ ಅವರಿದ್ದ ಹೊಸ ವಿಭಾಗೀಯ ಪೀಠ ರಚನೆಯಾಗಿತ್ತು. ಸೋಮವಾರ ತೀರ್ಪು ಪ್ರಕಟಿಸಿದ ಪೀಠ, ಸಂವಿಧಾನದ ಪರಿಚ್ಛೇದ 226 ಮತ್ತು 227ರ ಸಿಆರ್ ಪಿಸಿ 482ರ ಪ್ರಕಾರ ಏಕಸದಸ್ಯ ಪೀಠ ನೀಡಿದ್ದ ತೀರ್ಪು ಸರಿ ಎಂದು ತಿಳಿಸಿದೆ.

ಎಫ್ಐರ್ ರದ್ದು ಕೋರಿ ಸಿಆರ್ಪಿಸಿ ಅನ್ವಯ ದಾಖಲಿಸಬೇಕಾದ ಅರ್ಜಿಯನ್ನು ರಿಟ್ ಅರ್ಜಿ ಎಂದು ಪರಿಗಣಿಸಲಾಗದು. ಈ ಅರ್ಜಿಯೂ ಅದೇ ರೀತಿಯದಾಗಿದ್ದು ಕರ್ನಾಟಕ ಹೈಕೋರ್ಟ್ ಕಾಯಿದೆ 1961ರ ಸೆಕ್ಷನ್ 4ರ ಪ್ರಕಾರ ಈ ಅರ್ಜಿ ಯನ್ನು ಪರಿಗಣಿಸಲು ಸಾಧ್ಯವಿಲ್ಲ.

ಈ ಅರ್ಜಿ ದಂಡ ವಿಧಿಸಲು ಯೋಗ್ಯ. ಶ್ರೀಗಳು ವೈಯಕ್ತಿಕವಾಗಿ ಯಾವುದೇ ರೀತಿಯ ಸಂಪಾದನೆ ಮಾಡಿಲ್ಲ. ಒಂದೊಮ್ಮೆ ದಂಡ ವಿಧಿಸಿದ್ದೇ ಆದಲ್ಲಿ ಅದು ಮಠದ ಖಾತೆಯಿಂದ ನೀಡಬೇಕಾಗುತ್ತದೆ.
ಮಠಕ್ಕೆ ಸಾವಿರಾರು ಜನ ಭಕ್ತಾದಿಗಳು ದೇಣಿಗೆ ರೂಪದಲ್ಲಿ ನೀಡಿರುವ ಹಣವಾಗಿದ್ದು, ಆ ಹಣವನ್ನು ಧಾರ್ಮಿಕ ಚಟುವಟಿಕೆಗೆ ಬಳಸುತ್ತಿರುವ ಉದ್ದೇಶದಿಂದ ದಂಡ ವಿಧಿಸುತ್ತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ. ತನಿಖೆ ಪೂರ್ಣಗೊಂಡ ನಂತರ ಆಕ್ಷೇಪಣೆ ಇದ್ದರೆ ಅರ್ಜಿದಾರರು ಅರ್ಜಿ ಸಲ್ಲಿಸಬಹುದು ಎಂದು ಪೀಠ ತಿಳಿಸಿದೆ.

SCROLL FOR NEXT