ಜಿಲ್ಲಾ ಸುದ್ದಿ

ಕೊಲೆ ಕೇಸ್: ಪೊಲೀಸರ ನಿರ್ಲಕ್ಷ್ಯ ಕುರಿತು ತನಿಖೆ

ಬೆಂಗಳೂರು: ತಾಯಿ ಮೇಲಿನ ದ್ವೇಷಕ್ಕಾಗಿ ಮಗನ ಕೊಲೆ ಪ್ರಕರಣದಲ್ಲಿ ಚಂದ್ರ ಬಡಾವಣೆ ಪೊಲೀಸರ ಕರ್ತವ್ಯ ಲೋಪದ ಕುರಿತು ತನಿಖೆ ನಡೆಸಿ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ  ಅಲೋಕ್ ಕುಮಾರ್ ತಿಳಿಸಿದರು.

ಕಿರಣ್‍ಕುಮಾರ್ ಯಾದವ್(14) ಹತ್ಯೆ ಪ್ರಕರಣದಲ್ಲಿ ಇನ್ಸ್‍ಪೆಕ್ಟರ್ ಸುದರ್ಶನ್ ಮತ್ತು ಪೊಲೀಸ್ ಸಿಬ್ಬಂದಿ ಲೋಪ ಎಸಗಿರುವ ಆರೋಪ ಕೇಳಿ ಬಂದಿದೆ. ಹೀಗಾಗಿ ಶುಕ್ರವಾರ ಮೃತ ಬಾಲಕನ ಮನೆಗೆ ಭೇಟಿ ನೀಡಿ ಹೇಳಿಕೆ ಪಡೆಯುತ್ತೇನೆ. ಪ್ರಕರಣದ ಕುರಿತು ಎಸಿಪಿ ಹಾಗೂ ಡಿಸಿಪಿಗಳಿಂದ ವರದಿ ಪಡೆಯುವುದಾಗಿ ಹೇಳಿದರು.

ಫೆ.4ರಂದು ಬಾಲಕ ಕಿರಣ್ ಪಾಲಕರು ಪುತ್ರ ಕಾಣೆಯಾದ ಕುರಿತು ದೂರು ನೀಡಿ ನೆರೆ ಮನೆಯ ಮಂಜುನಾಥನ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಆಗ ಕೂಡಲೇ ಅವರನ್ನು ವಿಚಾರಣೆ ನಡೆಸಿ ಸೂಕ್ತ ಸಾಕ್ಷ್ಯಾಧಾರ ಕಲೆ ಹಾಕಬೇಕಿತ್ತು. ಆದರೆ, ಇದ್ಯಾವುದು ಮಾಡದೆ ನಿರ್ಲಕ್ಷ್ಯ ತೋರಿರುವುದು ಕಂಡುಬಂದರೆ ಶಿಸ್ತು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು. ಮಲ್ಲತ್ತಹಳ್ಳಿ ಸಮೀಪದ ಸಂಜೀವಿನಿನಗರ 10ನೇ ಕ್ರಾಸ್ ನಿವಾಸಿ ರವಿಕುಮಾರ್ ಮತ್ತು ಪ್ರಮೀಳಾ ಅವರ ಪುತ್ರ ಕಿರಣ್‍ನನ್ನು ಫೆ.4ರ ಸಂಜೆ ಆರೋಪಿ ಮಂಜುನಾಥ್(27) ಅಪಹರಿಸಿ ಬೆಂಗಳೂರು ವಿವಿ ಆವರಣದ ಭಾರತೀಯ ಕ್ರೀಡಾ ಪ್ರಾ„ಕಾರ ಹಿಂಭಾಗದ ನಿರ್ಜನ ಪ್ರದೇಶದಲ್ಲಿ ಬ್ಲೇಡ್‍ನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದ.

ಮಗ ಮನೆಗೆ ಬಾರದ ಕಾರಣ ಆತಂಕಗೊಂಡ ಪಾಲಕರು ರಾತ್ರಿ 9 ಗಂಟೆಗೆ ಪೊಲೀಸರಿಗೆ ದೂರು ನೀಡಿ  ಮಂಜುನಾಥ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಆದರೆ, ಆತನ್ನು ವಿಚಾರಣೆ ನಡೆಸದೆ ಸಾಕ್ಷ್ಯಾಧಾರ ತರುವಂತೆ ದೂರುದಾರರಿಗೆ ಹೇಳಿ ವಾಪಸ್ ಕಳುಹಿಸಿದ್ದರು ಎನ್ನುವ ಆರೋಪ ಕೇಳಿ ಬಂದಿವೆ.

SCROLL FOR NEXT