ಜಿಲ್ಲಾ ಸುದ್ದಿ

ಟಿಕೆಟ್ ಸೋಲ್ಡ್ ಔಟ್, ಅಭಿಮಾನಿಗಳಿಗೆ ಬೇಸರ

Vishwanath S

ಬೆಂಗಳೂರು: ಎರಡು ವರ್ಷಗಳಿಗೊಮ್ಮೆ ನಡೆಯುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಕಣ್ತುಂಬಿಕೊಳ್ಳಬೇಕು ಎನ್ನುವ ಹಲವರ ಆಸೆಗೆ ತಣ್ಣೀರು ಬಿದ್ದಿದೆ. ಪ್ರದರ್ಶನ ಆರಂಭಕ್ಕೂ ಮುನ್ನ ಸುಮಾರು 3 ಲಕ್ಷ ಮಂದಿ ಹೆಸರು ನೋಂದಣಿ ಮಾಡಿಸಿದ್ದು ಟಿಕೆಟ್ ಸೋಲ್ಡ್ ಔಟ್ ಆಗಿವೆ!

ಹೌದು, ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ ಕಣ್ತುಂಬಿಕೊಳ್ಳಲು ಬೆಂಗಳೂರು ಸೇರಿದಂತೆ ದೇಶದ ವಿವಿಧ ಪ್ರದೇಶಗಳ ಲಕ್ಷಾಂತರ ಮಂದಿ ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ, ಸ್ಥಳದ ಕೊರತೆ ಅಥವಾ ಸುರಕ್ಷತೆ ಕಾರಣದಿಂದ ಟಿಕೆಟ್‍ಗಳ ಮಾರಾಟವನ್ನು ಪ್ರದರ್ಶಕರು ಮಿತಿಗೊಳಿಸಿದ್ದಾರೆ. ಹೀಗಾಗಿ, ಏರೋ ಇಂಡಿಯಾ-2015 ವೆಬ್‍ಸೈಟ್‍ನಲ್ಲಿ ಟಿಕೆಟ್ ನೋಂದಣಿ ಮಾಡಿಸಲು ಹೋದವರಿಗೆ ಸರ್ವರ್ ಡೌನ್ ಆಗಿದ್ದು `ಎರರ್' ಸಂದೇಶ ಬರುತ್ತಿತ್ತು. ಮತ್ತೊಂದು ಕಡೆ ಟಿಕೆಟ್‍ಗಳು ಸೋಲ್ಡ್ ಔಟ್ ಆಗಿದ್ದು ಆಸಕ್ತರು ಗೇಟ್ ನಂಬರ್-3ರ ಬಳಿ ತೆರಳಿ ಸ್ಥಳದಲ್ಲೇ ಟಿಕೆಟ್ ಕೊಳ್ಳಬಹುದು ಎಂದು ಸಂದೇಶ ಬರುತ್ತಿತ್ತು. ಹೀಗಾಗಿ, ಮುಂಗಡವಾಗಿ ಟಿಕೆಟ್ ಕಾಯ್ದಿರಿಸಬೇಕು ಎಂದುಕೊಂಡವರಿಗೆ ನಿರಾಸೆಯಾಗಿದೆ.

ಎಕ್ಸಿಕ್ ಬ್ಯಾಂಕ್‍ಗಳಲ್ಲೂ ಟಿಕೆಟ್ ಗಳು ಲಭ್ಯವಿಲ್ಲ ಎಂದು ಹೇಳುತ್ತಿದ್ದಾರೆ. `ಎರಡು ಟಿಕೆಟ್ ಪಡೆಯಲು ಏರೋ ಇಂಡಿಯಾ ವೆಬ್‍ಸೈಟ್‍ನಲ್ಲಿ ಹಾಕಿದ್ದ ಎಕ್ಸಿಸ್ ಬ್ಯಾಂಕ್‍ನ ಮೂರು ಶಾಖೆಗಳಿಗೆ ಹೋಗಿದ್ದೆವು. ಆದರೆ, ಎಲ್ಲಾ ಕಡೆಗಳಲ್ಲೂ ಸೋಲ್ಡ್ ಔಟ್ ಎನ್ನುತ್ತಿದ್ದಾರೆ' ಎಂದು ರುದ್ರೇಗೌಡ ಎಂಬುವರು ಬೇಸರ ವ್ಯಕ್ತಪಡಿಸಿದರು. ಅಲ್ಲದೇ, ಯಲಹಂಕ ವಾಯುನೆಲೆಗೆ ತೆರಳಿ ಗೇಟ್ ಬಳಿ ಟಿಕೆಟ್ ಪಡೆಯಲು ಯತ್ನಿಸುವುದಾಗಿ ಹೇಳಿದರು. ಟಿಕೆಟ್ ಲಭ್ಯವಾಗದೇ ಇರುವ ಬಗ್ಗೆ ಸೇನೆಯ ಪಿಆರ್‍ಓ ಅವರನ್ನು ಸಂಪರ್ಕಿಸಿದಾಗ, ದೆಹಲಿಯ ಪ್ರದರ್ಶಕರೇ ಅದರ ನಿರ್ವಹಣೆ ವಹಿಸಿಕೊಂಡಿದ್ದು ಮಾಹಿತಿ ಇಲ್ಲ ಎಂದರು. ಇದೇ ವೇಳೆ, ದೆಹಲಿ ಮೂಲದ ಪ್ರದರ್ಶಕರು ಸಂಪರ್ಕಕ್ಕೆ ಸಿಗಲಿಲ್ಲ.

ಟ್ರಾಫಿಕ್ ಜಾಮ್
ವಿವಿಐಪಿಗಳು ಹಾಗೂ ಪ್ರದರ್ಶನಕ್ಕೆ ಆಗಮಿಸುವ ಅತಿಥಿಗಳಿಂದ ಸಂಚಾರ ದಟ್ಟಣೆ ಹೆಚ್ಚಾಗುತ್ತದೆ ಎನ್ನುವ ಕಾರಣಕ್ಕೆ ಲಾರಿ ಸೇರಿದಂತೆ ಭಾರಿ ವಾಹನಗಳ ಸಂಚಾರ ನಿಷೇಧ ಜತೆಗೆ ಮಾರ್ಗ ಬದಲಾವಣೆ ಮಾಡಲಾಗಿತ್ತು. ಆದರೂ, ಬುಧವಾರ ಬೆಳಗ್ಗೆ ಹಾಗೂ ಸಂಜೆ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡಿದರು. ವಾಹನಗಳ ನಿಯಂತ್ರಣಕ್ಕೆ ಟ್ರಾಫಿಕ್ ಪೊಲೀಸರು ಹರಸಾಹಸ ಪಡುತ್ತಿದ್ದರು. ಗುರುವಾರ, ಶುಕ್ರವಾರ ಹಾಗೂ ವಾರಾಂತ್ಯದಲ್ಲಿ ದಟ್ಟಣೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಪೊಲೀಸರು ತಿಳಿಸಿದರು.

ರಸ್ತೆಯಲ್ಲಿ ನಿಂತು ಕಣ್ತುಂಬಿಕೊಂಡರು
ವೈಮಾನಿಕ ಪ್ರದರ್ಶನಕ್ಕೆ ರು. 600 ಪಾವತಿಸಿ ಹತ್ತಿರದಿಂದ ನೋಡಿದವರು ಒಂದೆಡೆಯಾದರೆ, ಬಳ್ಳಾರಿ ರಸ್ತೆ ಬದಿಯಲ್ಲಿ ನಿಂತು ಸಾವಿರಾರು ಮಂದಿ ಉಕ್ಕಿನ ಹಕ್ಕಿಗಳ ಮೈ ನವಿರೇಳಿಸುವ ಪ್ರದರ್ಶನ ಕಣ್ತುಂಬಿಕೊಂಡರು. ಬೆಳಗ್ಗೆಯಿಂದಲೇ ರಸ್ತೆ ಬದಿಯಲ್ಲಿ, ಸಮೀಪದ ಕಟ್ಟಡಗಳ ಮೇಲೆ ನಿಂತು ಸಾವಿರಾರು ಮಂದಿ ವೀಕ್ಷಿಸಿದರು. ಸಾರ್ವಜನಿಕರ ನಿಯಂತ್ರಣಕ್ಕೆ ರಸ್ತೆ ಬದಿಯಲ್ಲಿ ನೂರಾರು ಪೊಲೀಸರನ್ನು ನಿಯೋಜಿಸಲಾಗಿತ್ತು.

SCROLL FOR NEXT