ಬೆಂಗಳೂರು: ನಿಯಮ ಮೀರಿ ಅಮಾನವೀಯ ವಾಗಿ ಪಶು ಹತ್ಯೆ ಮಾಡುತ್ತಿರುವ ಕಸಾಯಿಖಾನೆಗಳ ಪರಿಶೀಲನೆ ನಡೆಸಲು ಕೂಡಲೇ ವಿಚಕ್ಷಣಾ ದಳ ರಚಿಸಬೇಕು ಎಂದು ಆಡಳಿತ ಪಕ್ಷದ ನಾಯಕ ಎನ್.ಆರ್.ರಮೇಶ್ ಒತ್ತಾಯಿಸಿದರು.
ನಗರದ ಹಲವು ಕಸಾಯಿಖಾನೆಗಳಲ್ಲಿ ಅಮಾನುಷವಾಗಿ ಪಶುಹತ್ಯೆ ಮಾಡಲಾಗುತ್ತಿದೆ. ಚಪ್ಪಲಿ ಹೊಲಿಯಲು ಬಳಸುವ ಮೊಳೆಗಳನ್ನು ಹಸುಗಳಿಗೆ ಹಿಂಡಿಯಲ್ಲಿ ಹಾಕಿ ತಿನ್ನಿಸಲಾಗುತ್ತಿದೆ. ಇದಾದ ಕೆಲವೇ ಗಂಟೆಗಳಲ್ಲಿ ಹಸು, ಕರುಗಳು ರಕ್ತ ಸ್ರಾವವಾಗಿ ಸಾಯುತ್ತವೆ. ಸ್ಥಳೀಯ ಅಧಿಕಾರಿಗಳು ಅನಾರೋಗ್ಯ ಪೀಡಿತ ಎಂಬ ಪ್ರಮಾಣಪತ್ರ ನೀಡಿ ಕಸಾಯಿಖಾನೆ ಸೇರುವಂತೆ ಮಾಡುತ್ತಾರೆ ಎಂದು ಆರೋಪಿಸಿದರು.
ಆಯುಕ್ತ ಲಕ್ಷ್ಮೀನಾರಾಯಣ, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ಜಾಹೀರಾತಿಗೆ ಕಡಿವಾಣ: ಅನಧಿಕೃತ ಜಾಹೀರಾತು ಫಲಕಕ್ಕೆ ಬಿಬಿಎಂಪಿ ಕಠಿಣ ಕ್ರಮ ಕೈಗೊಳ್ಳಬೇಕು. ಜಾಹೀರಾತಿನಿಂದ ರು.20 ಕೋಟಿ ಆದಾಯ ಬರುತ್ತಿದ್ದು, ಇದರಲ್ಲಿ ಖರ್ಚು ಕಳೆದರೆ ರು.6 ಕೋಟಿ ಮಾತ್ರ ಉಳಿತಾಯವಾಗುತ್ತದೆ. ಎಲ್ಲ ಸರ್ಕಾರಗಳು ಬಿಬಿಎಂಪಿಯನ್ನು ಕಡೆಗಣಿಸಿದ್ದು, ಪಾಲಿಕೆ ಸದಸ್ಯರೇ ಸೂಕ್ತ ನಿರ್ಣಯ ಕೈಗೊಳ್ಳಬೇಕು ಎಂದು ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಸಲಹೆ ನೀಡಿದರು.