ಹಾಸನ: ಈಗಾಗಲೇ ವಿಳಂಬವಾಗಿರುವ ಶಿರಾಡಿ ಘಾಟ್ ರಸ್ತೆ ಕಾಂಕ್ರೀಟೀಕರಣ ಕಾಮಗಾರಿ ವೇಗೆ ಪಡೆದುಕೊಳ್ಳುವುದು ಅನುಮಾನ?
ಕಾಮಗಾರಿಗೆ ನಡೆಯುತ್ತಿರುವ ಸಿದ್ದತೆ ಗಮನಿಸಿದರೆ ಇಂತಹ ಪ್ರಶ್ನೆ ಮೂಡುತ್ತದೆ. ಏಕೆಂದರೆ ಕಾಂಕ್ರೀಟೀಕರಣಕ್ಕೆ ಅಗತ್ಯವಾಗಿ ಬೇಕಾಗುವ ಜಲ್ಲಿಕಲ್ಲು ಮತ್ತು ಮರಳನ್ನು ಇನ್ನೂ ದಾಸ್ತಾನು ಮಾಡಿಕೊಂಡಿಲ್ಲ.
ಮಲೆನಾಡಿನಲ್ಲಿ ಸಿಗುವ ಬಂಡೆಯನ್ನು ಒಡೆದು ತಯಾರಿಸುವ ಜಲ್ಲಿ ಕಲ್ಲುಗಳು ಶಿರಾಡಿಘಾಟ್ ರಸ್ತೆ ಕಾಂಕ್ರೀಟೀಕರಣಕ್ಕೆ ಉಪಯೋಗಕ್ಕೆ ಬರುವುದಿಲ್ಲ. ಏಕೆಂದರೆ ಅವು ಚಳಿಗಾಲಕ್ಕೆ ಕುಗ್ಗುವ ಮತ್ತು ಬೇಸಿಗೆಗೆ ಹಿಗ್ಗುವ ಗುಣ ಹೊಂದಿರುತ್ತವೆ. ಹೀಗಾಗಿ ಬೆಂಗಳೂರು ಸಮೀಪದ ಮಾಗಡಿ ಮತ್ತು ಬಿಡದಿಯಲ್ಲಿ ಸಿಗುವ ಕಲ್ಲುಗಳನ್ನು ತರಿಸಲಾಗುತ್ತಿದೆ.
ಆದರೆ ಕಾಮಗಾರಿ ಆರಂಭವಾದ ಸಮಯ ಬಂದಿದ್ದರೂ ಕಲ್ಲುಗಳನ್ನು ಸಂಗ್ರಹಿಸಿಲ್ಲ. ರಸ್ತೆ ಮಾಡಲು ಬಹುಮುಖ್ಯವಾಗಿಬೇಕಾದ ಕಲ್ಲನ್ನೇ ತರಿಸಿಲ್ಲ ಎಂದ ಮೇಲೆ ತರುವುದು ಯಾವಾಗ? ಈಗ ಜಿಲ್ಲೆಯಲ್ಲಿ ಮರಳಿಗೆ ತೀವ್ರ ಅಭಾವ ಉಂಟಾಗಿ ಸರ್ಕಾರಿ ಯೋಜನೆಗಳಡಿ ನಡೆಯುವ ಕಾಮಗಾರಿಗಳೇ ನಿಂತಿವೆ.
ಈ ನಡುವೆ ಶಿರಾಡಿ ಘಾಟ್ ರಸ್ತೆ ಕಾಮಗಾರಿಗೆ ಯಥೇಚ್ಛವಾಗಿ ಬೇಕಾದ ಮರಳು ಪೂರೈಕೆಯನ್ನು ತ್ವರಿತವಾಗಿ ಮಾಡಿಕೊಳ್ಳಬೇಕಾಗಿದೆ. ಇದು ಕೂಡ ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಕಷ್ಟಕರವೇ.
ಮೊದಲ ಹಂತದ 13 ಕಿಮೀ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಯನ್ನು ಆರಂಭಿಸಲು ಶುಕ್ರವಾರದಿಂದ(ಜ.2) ರಸ್ತೆ ಬಂದ್ ಮಾಡಲಾಗುತ್ತದೆ. ಮೇ ಅಂತ್ಯಕ್ಕೆ ಈ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.
ಆದರೆ ಆಗ ಘಾಟ್‌ನಲ್ಲಿ ಮುಂಗಾರು ಬಿರುಸುಗೊಳ್ಳುವ ಕಾಲ. ಹೀಗಾಗಿ ಮುಂಗಾರು ಮಳೆ ಭೀತಿಯಿಂದ ಅವಸರದಲ್ಲಿ ಕಾಮಗಾರಿ ಮುಗಿಸಬೇಕಾಗುತ್ತದೆ. ಹೀಗಾದರೆ ಕಳಪೆ ಕಾಮಗಾರಿ ನಡೆಯುವ ಸಂಭವ ಹೆಚ್ಚು ಎನ್ನುವ ಆತಂಕವೂ ವ್ಯಕ್ತವಾಗಿದೆ.
ನಿಗದಿಯಂತೆ ಸೆಪ್ಟೆಂಬರ್ ಅಥವಾ ನವೆಂಬರ್ ಆರಂಭದಲ್ಲೇ ಕಾಮಗಾರಿ ಶುರುವಾಗಬೇಕಿತ್ತು. ಹಾಗಾಗಿದ್ದರೆ ಮುಂಗಾರು ಆರಂಭವಾಗುವುದರ ಒಳಗೆ ನಿರಾಂತಕವಾಗಿ ಕಾಮಗಾರಿ ಮುಗಿಸಲು ಸಾಧ್ಯವಿತ್ತು.
ಬೆಂಗಳೂರು-ಹಾಸನ ಮಾರ್ಗದಲ್ಲಿ ಸಿಗುವ ರಾಷ್ಟ್ರೀಯ ಹೆದ್ದಾರಿ 48 ರ ಕಿಮೀ 216 ರಿಂದ 237 ರವರೆಗೆ ಮತ್ತು 230 ರಿಂದ 263ರವರೆಗೆ ಕಾಂಕ್ರೀಟೀಕರಣ ಮಾಡಲಾಗುತ್ತಿದೆ. 7.7 ಕಿಮೀ ಉದ್ದದ 5 ಸುರಂಗ ಮಾರ್ಗಗಳು, 4 ಎತ್ತರ ಸೇತುವೆಗಳನ್ನು ನಿರ್ಮಾಣ ಮಾಡಬೇಕಾಗಿದೆ.
ಈ ಕಾಮಗಾರಿಯನ್ನು ರಾಜ್ಯ ಲೋಕೋಪಯೋಗಿ ಇಲಾಖೆ ಉಸ್ತುವಾರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ಜಪಾನಿನ ಜೈ ಕಾ ಕಂಪನಿಯ ಸಹಯೋಗದಿಂದ ಕೈಗೊಳ್ಳುತ್ತಿದೆ.
-ದಯಾಶಂಕರ ಮೈಲಿ