ಬೆಂಗಳೂರು: ನಿಷೇಧಿತ ಉಗ್ರ ಸಂಘಟನೆ ಇಂಡಿಯನ್ ಮುಜಾಹಿದ್ದಿನ್(ಐಎಂ) ಜತೆ ನಂಟು ಹೊಂದಿರುವ ಆರೋಪದ ಮೇಲೆ ಬಂಧಿತನಾಗಿರುವ ಸಯ್ಯದ್ ಇಸ್ಮಾಯಿಲ್ ಅಫಕ್(34) ಹೋಮಿಯೋಪತಿ ವೈದ್ಯನಾಗಿದ್ದು ಈತನ ಪತ್ನಿ ಪಾಕಿಸ್ತಾನದ ನಿವಾಸಿ ಎಂದು ತಿಳಿದು ಬಂದಿದೆ.
ಸದ್ಯ ಇಸ್ಮಾಯಿಲ್ ಪತ್ನಿ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾಳೆ ಇಸ್ಮಾಯಿಲ್ ಉಗ್ರ ಸಂಘಟನೆ ಮುಖಂಡರೊಂದಿಗೆ ಸಂಪರ್ಕ ಸಾಧಿಸಲೆಂದು ಪಾಕಿಸ್ತಾನಿ ಮಹಿಳೆಯೊಂದಿಗೆ ಮದುವೆಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಈತನಿಗೆ ಭಾರತ ಸರ್ಕಾರವೂ ಕರಾಚಿಗೆ ಮಾತ್ರ ತೆರಳಲು ಶರತ್ತುಬದ್ಧ ವಿಸಾ ನೀಡಿತ್ತು. ಇಸ್ಮಾಯಿಲ್ ಹಲವು ಬಾರಿ ಪಾಕಿಸ್ತಾನಕ್ಕೆ ಹೋಗಿ ಬಂದಿದ್ದ. ಅಲ್ಲೇ ಉಗ್ರ ಮುಖಂಡರನ್ನು ಭೇಟಿ ಮಾಡಿ ಬಾಂಬ್ ತಯಾರಿಕೆ ಹಾಗೂ ಸ್ಫೋಟ ನಡೆಸುವ ಬಗ್ಗೆ ತರಬೇತಿಯನ್ನು ಹೊಂದಿದ್ದಾಗಿ ಮೂಲಗಳು ತಿಳಿಸಿವೆ. ಇಸ್ಮಾಯಿಲ್ ಪತ್ನಿಗೆ ಮಂಗಳೂರು ಹಾಗೂ ಭಟ್ಕಳದಲ್ಲಿ ಮಾತ್ರ ಇರಬೇಕು. ಬೇರೆ ನಗರಗಳಲ್ಲಿ ಓಡಾಡದಂತೆ ಶರತ್ತುಬದ್ಧ ವಿಸಾವನ್ನು ಭಾರತ ಸರ್ಕಾರ ನೀಡಿತ್ತು ಎಂದು ತಿಳಿದು ಬಂದಿದೆ. ಆದರೆ. ಆಕೆ ಸದ್ಯ ಪಾಕಿಸ್ತಾನದಲ್ಲಿ ನೆಲೆಸಿದ್ದಾಳೆಂದು ಮೂಲಗಳು ತಿಳಿಸಿವೆ.
ಭಾರತಕ್ಕೆ ಅತಿ ಹೆಚ್ಚು ಬೆದರಿಕೆ ಇರುವ ಪಾಕಿಸ್ತಾನ, ಅಘ್ಫಾನಿಸ್ತಾನ ರಾಷ್ಟ್ರಗಳೊಂದಿಗೆ ಸಂಪರ್ಕದಲ್ಲಿರುವ ಅನುಮಾನಾಸ್ಪದ ಕರೆಗಳ ಮೇಲೆ ಭಾರತೀಯ ಗುಪ್ತ ಚರ ಇಲಾಖೆಗಳು ನಿಗಾ ಇರಿಸಿರುತ್ತವೆ. ಇವು ಮೂವರು ಆರೋಪಿಗಳ ಬಂಧನಕ್ಕೆ ಸುಳಿವು ನೀಡಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ಇಸ್ಮಾಯಿಲ್ ಐಎಂ ಜತೆ ಇದ್ದದ್ದಲ್ಲದೇ ಅದಕ್ಕೆ ಮತ್ತಿಬ್ಬರನ್ನು ಸೇರಿಸಿಕೊಂಡು ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದು ಬೆಳಕಿಗೆ ಬಂದಿದೆ.
ಇಸ್ಮಾಯಿಲ್ ಸಹೋದರ ಸಂಬಂಧಿಗಳು ಎಂಜಿನಿಯರ್‌ಗಳಾಗಿದ್ದಾರೆ ಎಂದು ಕುಟುಂಬ ಸದಸ್ಯರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕಳೆದ 8 ತಿಂಗಳಿಂದ ಕಾಕ್ಸ್‌ಟೌನ್‌ನಲ್ಲಿರುವ ಅಪಾರ್ಟ್‌ಮೆಂಟ್ ಬಾಡಿಗೆ ಫ್ಲ್ಯಾಟ್‌ನಲ್ಲಿ ತಂದೆ ಸೈಯ್ಯದ್ ಅಬ್ದುಲ್ ಅಲಿಂ(75), ತಾಯಿ ನೂರುನ್ನಿಸಾ(62) ಜತೆ ಇಸ್ಮಾಯಿಲ್ ವಾಸವಿದ್ದಾನೆ.