ಬೆಂಗಳೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದ ಮೇಲ್ಮನವಿಯಲ್ಲಿ ಪ್ರಾಸಿಕ್ಯೂಷನ್ ಪರ ಸರ್ಕಾರದ ವಿಶೇಷ ವಕೀಲ ಭವಾನಿ ಸಿಂಗ್ ಅವರ ಮುಂದುವರಿಕೆ ಆಕ್ಷೇಪಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಏಕಸದಸ್ಯ ಪೀಠ ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಿದೆ.
ಪ್ರಾಸಿಕ್ಯೂಷನ್ ಪರ ಸರ್ಕಾರಿ ವಿಶೇಷ ವಕೀಲರಾದ ಭವಾನಿ ಸಿಂಗ್ ಅವರ ಮುಂದುವರಿಕೆಯನ್ನು ಆಕ್ಷೇಪಿಸಿ ಡಿಎಂಕೆ ನಾಯಕ ಅನ್ಬಳಗನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ ನ್ಯಾ.ಎಸ್ ಅಬ್ದುಲ್ ನಜೀರ್ ಅವರಿದ್ದ ಏಕಸದ್ಯಸ ಪೀಠ, ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಕರ್ನಾಟಕ ಹೈಕೋರ್ಟ್ ಜಯಲಲಿತಾ ಮತ್ತಿತರ ಮೂವರ ಮೇಲ್ಮನವಿ ವಿಚಾರಣೆಗೆ ವಿಶೇಷ ನ್ಯಾಯಪೀಠ ರಚಿಸಿದೆ. ಹೀಗಿರುವಾಗಿ ಈ ಆಕ್ಷೇಪಣಾ ಅರ್ಜಿಯನ್ನು ಬೇರೊಂದು ಪೀಠದಲ್ಲಿ ವಿಚಾರಣೆ ನಡೆಸುವುದು ಉಚಿತವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿತು. ಈ ಕುರಿತು ಯಾವ ಪೀಠ ಅರ್ಜಿ ವಿಚಾರಣೆ ನಡೆಸಬೇಕೆಂಬುದನ್ನು ಮುಖ್ಯ ನ್ಯಾಯಮೂರ್ತಿ ಅವರ ವಿವೇಚನೆಗೆ ಒಪ್ಪಿಸಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾಯಿಸಿದೆ.