ಜಿಲ್ಲಾ ಸುದ್ದಿ

ವಿದ್ಯಾವಂತ ವರ್ಗವೇ ಹೆಚ್ಚು ಜಾತೀಯತೆಯ ಪ್ರತಿಪಾದಕರು

Sumana Upadhyaya

ಬೆಂಗಳೂರು: ವಿದ್ಯಾವಂತ ವರ್ಗವೇ ಜಾತೀಯತೆಯನ್ನು ಹೆಚ್ಚೆಚ್ಚು ಪ್ರತಿಪಾದಿಸುವ ಮೂಲಕ ಸಮಾಜ ಕಲುಷಿತಗೊಳ್ಳಲು ಕಾರಣರಾಗಿದ್ದಾರೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಡಾ.ದೊಡ್ಡರಂಗೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ಆಧುನಿಕರು ಕಂಡ ಬಸವಣ್ಣ' ಎಂಬ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಇಂದು ಅಸಮಾನತೆ ಎಂಬುದು ತಾಂಡವವಾಡುತ್ತಿದೆ. ಮನುಷ್ಯರು ಕ್ಷುದ್ರ ಜೀವಿಗಳಾಗುತ್ತಿದ್ದಾರೆ. ಮಹಿಳೆಯರನ್ನು ನಿರ್ಲಕ್ಷ್ಯ ಮಾಡುತ್ತಿದ್ದೇವೆ. ಈ ಕುರಿತು ಜನರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಬಸವಣ್ಣನವರ 300 ಆಯ್ದ ವಚನಗಳನ್ನು ಸಂಕಲಿಸಿ ಕನ್ನಡ ಸಂಸ್ಕೃತಿ ಇಲಾಖೆ 5ರಿಂದ 10  ರೂಪಾಯಿಗೆ ಮನೆಮನೆಗೆ ತಲುಪಿಸಬೇಕು. ಆ ಮೂಲಕ ಸಮಾಜದ ಕಾಯಿಲೆಗಳಿಗೆ ಕಾಯಕಲ್ಪ ಮಾಡಬೇಕೆಂದು ಸಲಹೆ ನೀಡಿದರು.

ಸಮಾಜ ವಿಜ್ಞಾನಿ ಬಸವಣ್ಣ: ಆಧುನಿಕ ಕವಿಗಳು ಬಸವಣ್ಣನವರನ್ನು ಶ್ರೇಷ್ಠ ವಚನಕಾರನನ್ನಾಗಿ ಬಿಂಬಿಸಿದ್ದಾರೆ. ಬಸವಣ್ಣ ಜಗತ್ತಿನ ಶ್ರೇಷ್ಠ ಸಮಾಜ ವಿಜ್ಞಾನಿ. ಸಾಮಾಜಿಕ ಲೋಪಗಳಿಗೆ ಸೂತ್ರಗಳನ್ನು ಕಂಡು ಹಿಡಿದವರು. ಆದ್ದರಿಂದ ಚರಿತ್ರಕಾರರು ಅವರನ್ನು ಯುಗ ಪುರುಷ ಎಂದು ಗುರುತಿಸಿದ್ದಾರೆ. ಇಂದು ವ್ಯಕ್ತಿತ್ವ ವಿಕಸನದ ತರಗತಿಗಳಿಗೆ ಹೋಗುವ ಬದಲು, ಬಸವಣ್ಣನವರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ, ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು. ಬಸವಣ್ಣ ಆಳುವ ವರ್ಗದ ವಿರುದ್ಧ ಹೋರಾಟ ನಡೆಸಿ, ಮನುಕುಲದ ಅಭಿವೃದ್ಧಿಗಾಗಿ ಶ್ರಮಿಸಿದವರು ಎಂದು ಬಣ್ಣಿಸಿದರು.

SCROLL FOR NEXT