ಜಿಲ್ಲಾ ಸುದ್ದಿ

ಕೋಮು ಹಿಂಸೆ: ಬೆಳಗಾವಿ ನಗರ ಶಾಂತ

Srinivas Rao BV

ಬೆಳಗಾವಿ: ಪುಟಾಣಿಗಳ ಕ್ರಿಕೆಟ್ ವಿಚಾರವಾಗಿ ಶುರುವಾದ ಕಿಡಿಗೇಡಿಗಳ ಜಗಳ ಕೋಮು ಸಂಘರ್ಷದ ಸ್ವರೂಪ ಪಡೆದ ಕಾರಣ ಉದ್ವೇಗಗೊಂಡಿದ್ದ ಬೆಳಗಾವಿ ಸದ್ಯ ತಣ್ಣಗಾಗಿದೆ.

ಸರ್ಕಾರಿ ಕನ್ನಡಾ ಶಾಲೆಯ ಮೈದಾನದಲ್ಲಿ ಚಿಕ್ಕ ಮಕ್ಕಳು ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಎರಡು ಗುಂಪುಗಳ ನಡುವೆ ಕ್ಷುಲ್ಲಕ ವಿಚಾರಕ್ಕಾಗಿ ಜಗಳವಾಗಿ ಪರಸ್ಪರ ಬಾಟಲಿ ತೂರಾಟ ಮಾಡುವವರೆಗೂ ಹೋಗಿತ್ತು. ಪೊಲೀಸರ ಮಧ್ಯಪ್ರವೇಶದಿಂದ ಕೆಲಹೊತ್ತಿನಲ್ಲೇ ಪರಿಸ್ಥಿತಿ ಶಾಂತವಾಗಿತ್ತು. ಹೊಗೆಯಾಡುತ್ತಿದ್ದ ಅಸಮಾಧಾನ ಮಧ್ಯರಾತ್ರಿ ದಿಢೀರ್ ಸ್ಫೋಟಿಸಿ ಕೋಮು ಸಂಘರ್ಷಕ್ಕೆ ತಿರುಗಿದೆ. ರಾತ್ರಿ 12 ರಿಂದ ಬೆಳಗಿನ ಜಾವ 1 .30 ಅವಧಿಯಲ್ಲಿ ಕೆಲವು ದುಷ್ಕರ್ಮಿಗಳು ಗಾಂಧಿನಗರ, ನ್ಯೂ ಗಾಂಧಿನಗರ, ದುರ್ಗಾಮಾತಾ ರಸ್ತೆ, ಜಾಕ್ರಿಯಾ ಮೊಹಲ್ಲಾ ಸುತ್ತಮುತ್ತಲಿನ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಇದರಿಂದ ಕೆರಳಿದ ಇನ್ನೊಂದು ಕೋಮಿನವರೂ ಘರ್ಷಣೆಗೆ ಇಳಿದಿದ್ದಾರೆ. ಎರಡೂ ಕಡೆಯವರು ಅಕ್ಕಪಕ್ಕದ ಮನೆಗಳಿಗೆ ನುಗ್ಗಿ ಅಮಾಯಕರನ್ನು ಹೊರಗೆಳೆದು ಥಳಿಸಿದ್ದಾರೆ. ಕಲ್ಲು ತೂರಾಟದಲ್ಲಿ 30 ಕ್ಕೂ ಹೆಚ್ಚು ವಾಹಬ್ನಗಳು ಜಖಂಗೊಂಡಿವೆ.ಪರಿಸ್ಥಿತಿ ನಿಯಂತ್ರಿಸಲು ಹೋದ ಪೊಲೀಸ್ ಸಿಬ್ಬಂದಿ ಮೇಲೂ ಹಲ್ಲೆ ನಡೆದಿದ್ದು ಪೊಲೀಸ್ ಜೀಪ್ ಗೂ ಬೆಂಕಿ ಹಚ್ಚಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು 6 ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿದ್ದಲ್ಲದೇ 8 ಸುತ್ತು ಅಶ್ರುವಾಯು ಪ್ರಯೋಗಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 56 ಜನರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎಸ್.ರವಿ ತಿಳಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಸಂಸದ ಸುರೇಶ ಅಂಗಡಿ ಪ್ರತ್ಯೇಕವಾಗಿ ಶಾಂತಿ ಸಭೆ ನಡೆಸಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ನಾಗರಿಕರಲ್ಲಿ ಮನವಿ ಮಾಡಿದ್ದಾರೆ.

SCROLL FOR NEXT