ಬೆಂಗಳೂರು: ಬೆಂಗಳೂರಿನ ಕೋರಮಂಗಲದಲಿರುವ ಬಹುಮಹಡಿ ಕಟ್ಟಡ ಸಲಾರ್ ಪುರಿಯಾ ಟವರ್ಸ್ ಅನ್ನು ಬುಧವಾರ ಸರ್ಕಾರ ವಶಕ್ಕೆ ಪಡೆದುಕೊಂಡಿದೆ.
ಸರ್ವೆ ನಂಬರ್ 149ರಲ್ಲಿ ಅಕ್ರಮವಾಗಿ ಸರ್ಕಾರಿ ಖರಾಬು ಜಮೀನಿನಲ್ಲಿ ನಿರ್ಮಿಸಲಾಗಿದ್ದ ಸಲಾರ್ ಪುರಿಯಾ ಪ್ರೈ.ಲಿ. ಸಂಸ್ಥೆಗೆ ಸೇರಿದ ಬಹುಮಹಡಿ ಕಟ್ಟಡ ಸೇರಿದಂತೆ 2.2 ಎಕರೆ ಜಮೀನನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ಅವರು ವಶಪಡಿಸಿಕೊಂಡಿದ್ದಾರೆ.
ದಾಖಲೆ ಪರಿಶೀಲನೆ ವೇಳೆ ಸರ್ಕಾರಿ ಜಮೀನು ಅತಿಕ್ರಮಣದ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಇಂದು ಸ್ಥಳಕ್ಕೆ ಭೇಟಿ ನೀಡಿದ ವಿ.ಶಂಕರ್, ಸಲಾರ್ ಪುರಿಯಾ ಕಟ್ಟಡದಲ್ಲಿರುವ ಕಚೇರಿಗಳನ್ನು 15 ದಿನದಲ್ಲಿ ತೆರವು ಮಾಡಬೇಕು ಎಂದು ಗಡುವು ನೀಡಿದ್ದಾರೆ.
ಹಿಂದೆ ಬೆಲ್ಲದ ಆಲದಮನೆ ಪ್ರದೇಶವಾಗಿದ್ದ ಈ ಜಾಗ ಸರ್ಕಾರದ್ದು ಎಂದು 2007ರಲ್ಲೇ ಬೆಂಗಳೂರು ದಕ್ಷಿಣ ಭೂನ್ಯಾಯಮಂಡಳಿ ತೀರ್ಪು ನೀಡಿತ್ತು. ಆದರೂ ಆ ಜಾಗವನ್ನು ಸರ್ಕಾರ ಇದುವರೆಗೂ ಕನ್ನ ವಶಕ್ಕೆ ಪಡೆದಿರಲಿಲ್ಲ.
ಈ ಜಾಗ ತಮ್ಮದೆಂದು ಯಲ್ಲಪ್ಪ ರೆಡ್ಡಿ, ಕೃಷ್ಣ ಐಯ್ಯಂಗಾರ್, ಲಕ್ಷ್ಮಣ್ ರಾವ್ ಹಾಗೂ ಮುನಿಸ್ವಾಮಿ ಶೆಟ್ಟಿ ಎಂಬುವವರು ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಅಲ್ಲದೆ 1950ರ ಇನಾಂ ರದ್ದಾಯತಿ ಕಾಯ್ದೆ ಪ್ರಕಾರ ಜಾಗ ತಮ್ಮದೆಂದು ಹಾಗೂ ಈ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದೇವು ಎಂದು ವಾದಿಸಿದ್ದರು. ಇದೇ ವೇಳೆ ಅರ್ಜಿದಾರ ಮುನಿಸ್ವಾಮಿ ಶೆಟ್ಟಿ ಸಲಾರ್ ಪುರಿಯಾ ಕಂಪನಿಗೆ ಜಾಗ ಮಾರಟ ಮಾಡಿದ್ದರು.