ಬೆಂಗಳೂರು: ಮಕ್ಕಳಲ್ಲಿ ಅಪೌಷ್ಟಿಕತೆ ನೀಗಿಸುವ ದೃಷ್ಟಿಯಿಂದ ಸರ್ಕಾರಿ ಹಾಗೂ ಅಂಗನವಾಡಿ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಿಡಿ ವಾರದಲ್ಲಿ ಮೂರು ದಿನ ನೀಡುತ್ತಿರುವ ಹಾಲನ್ನು ಮುಂದಿನ ದಿನಗಳಲ್ಲಿ ಐದು ದಿನಕ್ಕೆ ವಿಸ್ತರಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಕರ್ನಾಟಕ ಹಾಲು ಮಹಾಮಂಡಳಿ ನಿಯಮಿತ ಸೋಮವಾರ ಹಮ್ಮಿಕೊಂಡಿದ್ದ `ವಿಶ್ವ ಹಾಲು ದಿನಾಚರಣೆ ಹಾಗೂ ನಂದಿನಿ ಮೊಬೈಲ್ ಆ್ಯಪ್ ಬಿಡುಗಡೆ' ಕಾರ್ಯಕ್ರಮದಲ್ಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಷಯ ತಿಳಿಸಿದ್ದಾರೆ. ಕ್ಷೀರಭಾಗ್ಯ ಯೋಜನೆಯಡಿ ವಾರದಲ್ಲಿ 3 ದಿನ ಒಂದು ಕೋಟಿ ಶಾಲಾ ಹಾಗೂ ಅಂಗನವಾಡಿ ಮಕ್ಕಳಿಗೆ 150 ಗ್ರಾಂ. ಹಾಲು ವಿತರಿಸಲಾಗುತ್ತಿದೆ. ಇದನ್ನು ವಾರಕ್ಕೆ ಐದು ದಿನ ವಿಸ್ತರಿಸಲು ಪ್ರಸ್ತಾವನೆ ಬಂದಿದ್ದು, ಈ ಪ್ರಸ್ತಾಪವನ್ನು ಸರ್ಕಾರ ಸಕಾರಾತ್ಮಕವಾಗಿ ಪರಿಗಣಿಸಿದ್ದು, ಶೀಘ್ರದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳುವುದು. ಈಗ ಮೂರು ದಿನ ಹಾಲು ವಿತರಣೆ ಮಾಡುತ್ತಿರುವುದರಿಂದ ಹಾಜರಾತಿ ಹೆಚ್ಚಿದ್ದು, ಪೌಷ್ಟಿಕಾಂಶದ ಕೊರತೆಯಿಂದ ಬಳಲುತ್ತಿದ್ದ ಮಕ್ಕಳ ಸಂಖ್ಯೆಯಲ್ಲಿ ಇಳಿಮುಖ ಕಂಡಿತು ಯೋಜನೆ ಆರಂಭಿಸಿದ ಬಳಿಕ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಮಕ್ಕಳ ಆರೋಗ್ಯ ಸ್ಥಿತಿ ಸುಧಾರಣೆ ಯಾಗಿದ್ದು, ಮುಂದೆಯೂ ಪರಿಣಾಮ ಬೀರಲಿದೆ. 3 ದಿನಹಾಲು ನೀಡುತ್ತಿರುವುದರಿಂದ ವಾರ್ಷಿಕ ರು. 600 ಕೋಟಿ ಖರ್ಚಾಗುತ್ತದೆ. 2 ದಿನ ಹೆಚ್ಚುವರಿಯಾಗಿ ವಿಸ್ತರಿಸುವುದರಿಂದ ರು.400 ಕೋಟಿ ಬೊಕ್ಕಸಕ್ಕೆ ಹೊರೆಯಾಗುತ್ತದೆ. ಆದರೆ,ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಎಷ್ಟೇ ಖರ್ಚಾದರೂ ಸರ್ಕಾರ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.