ಜಿಲ್ಲಾ ಸುದ್ದಿ

ವಂಚನೆ, ಅಪಹರಣ; 10 ಜನ ಸೆರೆ

ಬೆಂಗಳೂರು: ಪೊಲೀಸ್ ಕಾನ್ಸ್ ಟೇಬಲ್ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚಿಸಿದ್ದ ಆರೋಪಿ ಹಾಗೂ ಆತನಿಗೆ ಸಾಥ್ ನೀಡಿದ್ದ ಮೂವರನ್ನು ಅಪಹರಿಸಿದ್ದ ವಂಚನೆಗೊಳಗಾದ ವ್ಯಕ್ತಿ ಸೇರಿದಂತೆ 10 ಜನ ಆರೋಪಿಗಳನ್ನು ಯಲಹಂಕ ಉಪನಗರ ಪೊಲೀಸರು ಬಂಧಿಸಿದ್ದಾರೆ.

ಯಲಹಂಕ ಹಾಗೂ ಸುತ್ತಮುತ್ತಲಿನ ಪ್ರದೇಶದ ನಿವಾಸಿಗಳಾದ ರಾಜವರ್ಧನ್, ನಾಗರ್ಜುನ, ವಜ್ರೇಶ, ಮಂಜು, ಮುತ್ತುರಾಯ, ರವೀಶ, ಮಂಜುನಾಥ, ಲಕ್ಷ್ಮೀಕಾಂತ, ಅಜಯ್ ಮತ್ತು ಸುರೇಶ್ ಅವರನ್ನು ಬಂಧಿಸಲಾಗಿದ್ದು, ಇನ್ನೂ ಮೂವರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಸಂಜೆ ಅಟ್ಟೂರು ಬಡಾವಣೆ ನಿವಾಸಿ ರಾಜವರ್ಧನ್(24), ನ್ಯಾಯಾಂಗ ಬಡಾವಣೆ ನಿವಾಸಿ ಚಂದ್ರಗಿರಿ(22) ಹಾಗೂ ದೊಡ್ಡ ಬೆಟ್ಟಹಲಸೂರು ನಿವಾಸಿ ಆಕಾಶ(24) ಎಂಬುವರನ್ನು ಬಂಧಿತರು ಅಪಹರಿಸಿ ವೀರಸಾಗರ ಸಮೀಪದ ಫಾರ್ಮ್ ಹೌಸ್ ವೊಂದಕ್ಕೆ ಕರೆದೊಯ್ದು ಕೂಡಿಟ್ಟು ಹಲ್ಲೆ ನಡೆಸಿದ್ದರು.

ಏನಿದು ಘಟನೆ?: ಕೆಎಸ್‍ಆರ್‍ಟಿಸಿಯಲ್ಲಿ ಸಹಾಯಕ ಸ್ಟೋರ್ ಕೀಪರ್ ಆಗಿರುವ ಪ್ರಮುಖ ಆರೋಪಿ ನಾಗರ್ಜುನ ಹಾಗೂ ರಾಜವರ್ಧನ ಸ್ನೇಹಿತರು. ನಾಗರ್ಜುನನ ಪತ್ನಿ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆ ಪರೀಕ್ಷೆ ಬರೆದಿದ್ದರು. ಇದನ್ನು ತಿಳಿದಿದ್ದ ರಾಜವರ್ಧನ, ಸ್ನೇಹಿತರಾದ ಚಂದ್ರಗಿರಿ ಹಾಗೂ ಪ್ರಕಾಶ ಜತೆ ಸೇರಿ ನಾಗರ್ಜುನನ ಪತ್ನಿಗೆ ಪೊಲೀಸ್ ಇಲಾಖೆಯಲ್ಲಿ ಕೆಲಸ
ಕೊಡಿಸುವುದಾಗಿ ನಂಬಿಸಿದ್ದ. ತನಗೆ ಇಲಾಖೆಯಲ್ಲಿ ಪರಿಚಿತರಿದ್ದು, ಲಕ್ಷಾಂತರ ರುಪಾಯಿ ಹಣ ನೀಡಿದರೆ ಕೆಲಸ ಆಗುತ್ತದೆ ಎಂದು ಹೇಳಿದ್ದ. ಮೂವರ ಮಾತನ್ನು ನಂಬಿದ ನಾಗರ್ಜುನ ಪತ್ನಿಗೆ ಕೆಲಸ ಸಿಗುತ್ತದೆಂದು ನಂಬಿ ರು.1.5 ಲಕ್ಷ ನೀಡಿದ್ದ. ಹಣ ಪಡೆದ ಆರೋಪಿಗಳು ಕೆಲ ದಿನಗಳ ಬಳಿಕ ನಾಗರ್ಜುನನ ಕೈಗೆ ಸಿಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದರು.

ಮೊಬೈಲ್ ಫೋನ್‍ಗೆ ಕರೆ ಮಾಡಿದರೂ ಪ್ರತಿಕ್ರಿಯಿಸುತ್ತಿರಲಿಲ್ಲ. ಇದರಿಂದ ಅನುಮಾನಗೊಂಡ ನಾಗರ್ಜುನ, ಮೂವರಿಗಾಗಿ ಹುಡುಕಾಟ ಆರಂಭಿಸಿದರು. ಭಾನುವಾರ ರಾಜವರ್ಧನನ ವಿಳಾಸ ಹುಡುಕಲು ಯಶಸ್ವಿಯಾದ. ಬಳಿಕ ಇನ್ನಿಬ್ಬರನ್ನೂ ಯಲಹಂಕ ಉಪನಗರ ಆರ್‍ಟಿಓ ಕಚೇರಿ ಬಳಿ ಕರೆಸಿಕೊಂಡು ವ್ಯಾನ್‍ನಲ್ಲಿ ಅಪಹರಿಸಿದ್ದ. ಈ ಮೂವರನ್ನೂ ತನ್ನ ಮನೆಗೆ ಕರೆದುಕೊಂಡು ಹೋದ ನಾಗರ್ಜುನ, ಮೂವರ ಮೇಲೆ ಹಲ್ಲೆ ನಡೆಸಿದ್ದ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆತನ ಪಾಲಕರು, ಬೇರೆ ಕಡೆ ಹೋಗುವಂತೆ ಗದರಿಸಿದ್ದರು. ಹೀಗಾಗಿ, ವೀರಸಾಗರದಲ್ಲಿರುವ ಪರಿಚಿತ ರಮೇಶ ಎಂಬಾತನ ಫಾರ್ಮ್ ಹೌಸ್‍ಗೆ ಕರೆದೊಯ್ದಿದ್ದ. ಫಾರ್ಮ್ ಹೌಸ್‍ಗೆ ಬಂದು ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಆ ಮೂವರನ್ನು ಕೊಠಡಿಯೊಂದರಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದ. ಅಲ್ಲದೇ, ಸೋಮವಾರ ಬೆಳಗ್ಗೆ ಮೊಬೈಲ್ ಫೋನ್ ನೀಡಿ, ಸ್ನೇಹಿತರಿಗೆ ಕರೆ ಮಾಡಿ ಹಣದ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದ್ದ.

ಹಲ್ಲೆಗೊಳಗಾದ ಚಂದ್ರಗಿರಿ, ರಿಯಲ್ ಎಸ್ಟೇಟ್ ಎಜೆಂಟ್ ಆಗಿರುವ ಚಿಕ್ಕಪ್ಪ ವೆಂಕಟೇಶ್ ಎಂಬುವರಿಗೆ ಕರೆ ಮಾಡಿ ನಡೆದ ವಿಷಯವನ್ನು ವಿವರಿಸಿದ್ದ. ಅಲ್ಲದೇ ಫಾರ್ಮ್ ಹೌಸ್‍ನ ವಿಳಾಸವನ್ನು ನೀಡಿದ್ದ. ಕೂಡಲೇ, ವೆಂಕಟೇಶ್ ಪೊಲೀಸರಿಗೆ ಮಾಹಿತಿ ನೀಡಿದ್ದ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಫಾರ್ಮ್ ಹೌಸ್ ಗೆ ತೆರಳಿ 9 ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಬಳಿಕ ಫಾರ್ಮ್ ಹೌಸ್‍ನ ಕೊಠಡಿಯಲ್ಲಿದ್ದ ಮೂವರನ್ನು ರಕ್ಷಿಸಿ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಯಲಹಂಕ ಉಪನಗರ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

SCROLL FOR NEXT