ಬೆಂಗಳೂರು: ರಾಮನಗರ ಜಿಲ್ಲೆಯಲ್ಲಿ ಬೃಹತ್ ಬುದ್ಧನ ಮೂರ್ತಿ ಸ್ಥಾಪಿಸಲು ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಉದ್ದೇಶಿತ ಯೋಜನೆಗಾಗಿ ಸ್ವಯಂ
ಸೇವಾ ಸಂಘಟನೆಯೊಂರಿಂದ ಪಡೆದ ರು.32 ಲಕ್ಷ ಹಿಂದಿರುಗಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ರಾಮನಗರದ ಗೋಪಾಲಪುರ ಗ್ರಾಮದ ಹಂದಿಗೊಂದಿ ರಾಜ್ಯ ಮೀಸಲು ಅರಣ್ಯದಲ್ಲಿನ ಬಂಡೆಯ ಮೇಲೆ ಬುದ್ಧನ ಮೂರ್ತಿ ಸ್ಥಾಪಿಸಲು ಉದ್ದೇಶಿಸಲಾಗಿತ್ತು. ಆದರೆ ಮೀಸಲು ಅರಣ್ಯ ಪ್ರದೇಶದಲ್ಲಿ ಬುದ್ಧನ ಮೂರ್ತಿ ಸ್ಥಾಪಿಸಲು ಭೂಮಿ ಮಂಜೂರು ಮಾಡಲು ಕೇಂದ್ರ ನಿರಾಕರಿಸಿದ್ದರೂ ಸಂಸ್ಥೆಯಿಂದ ಪಡೆದ ಹಣ ಹಿಂದಿರುಗಿಸದ ರಾಜ್ಯ ಸರ್ಕಾರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಹಂಗಾಮಿ ಮುಖ್ಯ ನ್ಯಾ.ಎಸ್.ಕೆ.ಮುಖರ್ಜಿ ಹಾಗೂ ನ್ಯಾ. ರಾಮಮೋಹನರೆಡ್ಡಿ ಅವರಿದ್ದ ವಿಭಾಗೀಯ ಪೀಠ, ಮುಂದಿನ ವಿಚಾರಣೆಯಲ್ಲಿ ನ್ಯಾಯಾಲಯದಲ್ಲೇ ಬಾಕಿ ಮೊತ್ತದ ಚೆಕ್ ಅನ್ನು ಸಂಘಟನೆಗೆ ಹಸ್ತಾಂತರಿಸುವಂತೆ ಸೂಚನೆ ನೀಡಿದೆ.
ರಾಮನಗರದ ಹಂದಿಗೊಂದಿಯ ಅರಣ್ಯ ಪ್ರದೇಶದಲ್ಲಿನ ಬೃಹತ್ ಕಲ್ಲುಗಳ ಮೇಲೆ ಬುದ್ಧನ 712 ಅಡಿ ಎತ್ತರದ ವಿಗ್ರಹ ಸ್ಥಾಪಿಸಲು ರಾಮನಗರದ ಸಂಗಮಿತ್ರ ಫೌಂಡೇಷನ್ ಸರ್ಕಾರದ ಅನುಮತಿ ಕೋರಿತ್ತು. ರಾಜ್ಯ ಅರಣ್ಯ ಇಲಾಖೆ ಅದಕ್ಕೆ ಅನುಮತಿ ನೀಡಿ ಸಂಸ್ಥೆಯಿಂದ ರು.32.16 ಲಕ್ಷ ಶುಲ್ಕ ಪಡೆದಿತ್ತು. ಆದರೆ, ಈ ಪ್ರದೇಶವನ್ನು ಕರಡಿ ಅಭಯಾರಣ್ಯ ಎಂದು ಘೋಷಿಸಿರುವ ಹಿನ್ನೆಲೆಯಲ್ಲಿ ಈ ಯೋಜನೆಗೆ ಭೂಮಿ ಮಂಜೂರು ಮಾಡಲು ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿತ್ತು.
ಇದನ್ನು ಪ್ರಶ್ನಿಸಿ ಸಂಸ್ಥೆ ಹೈ ಕೋರ್ಟ್ ಮೆಟ್ಟಿಲೇರಿತ್ತು. ಅರ್ಜಿ ವಿಚಾರಣೆ ನಡೆಸಿದ ಏಕಸದಸ್ಯ ಪೀಠ, ಪ್ರಸ್ತಾವನೆಯನ್ನು ಮರು ಪರಿಶೀಲಿಸುವಂತೆ ಸರ್ಕಾರಕ್ಕೆ ಸೂಚಿಸಿತ್ತು. ಆದರೆ, ಕೇಂದ್ರ ಸರ್ಕಾರ ಅದನ್ನು ಕರಡಿ ಅಭಯಾರಣ್ಯ ಎಂದು ಘೋಷಿಸಿದ ಮೇಲೆ ಮರು ಪರಿಶೀಲನೆ ಅಸಾಧ್ಯ ಎಂದು ಆಕ್ಷೇಪಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿ ಸಂದರ್ಭದಲ್ಲಿ ನ್ಯಾಯಪೀಠ, ಯೋಜನೆಗೆ ಅನುಮೋದನೆ ನೀಡಲಾಗದಿದ್ದಲ್ಲಿ ಸಂಸ್ಥೆಯ ಹಣವನ್ನೇಕೆ ಹಿಂದಿರುಗಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ಹಣವನ್ನು ಸಂಸ್ಥೆಗೆ ಮರು ಪಾವತಿ ಮಾಡುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿತು.