ಬೆಂಗಳೂರು: ನಗರದ ಮಾವಳ್ಳಿ ಬಿಸಿಲು ಮಾರಮ್ಮ ಹಾಗೂ ಆರ್.ವಿ. ರಸ್ತೆಯ ಬಿಸಿಲು ಮಾರಮ್ಮ ದೇವಿ ಹಬ್ಬದಲ್ಲಿ ಪ್ರಾಣಿಬಲಿ ಕೊಡುವ ಆಚರಣೆಯನ್ನು ಭಕ್ತರು ಕೈಬಿಡಬೇಕು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿಯ ಅಧ್ಯಕ್ಷ ದಯಾನಂದ ಸ್ವಾಮೀಜಿ ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.8ರಿಂದ 11ರವರೆಗೆ ಈ ದೇವಸ್ಥಾನದಲ್ಲಿ ದೇವಿ ಹಬ್ಬ ನಡೆಯಲಿದೆ. ದೇವಿಯ ಮೆರವಣಿಗೆಯ ಸಂದರ್ಭದಲ್ಲಿ ಕುರಿ, ಕೋಳಿ, ಆಡು ಮುಂತಾದ ನೂರಾರು ಪ್ರಾಣಿಗಳ ಬಲಿಯನ್ನು ಹರಕೆಯ ರೂಪದಲ್ಲಿ ನೀಡಲಾಗುತ್ತದೆ. ಪ್ರಾಣಿಗಳ ರಕ್ತದೋಕುಳಿ ಹಾಗೂ ಬಲಿಗೆ ಬದಲಾಗಿ ಅರಿಶಿನ, ಕುಂಕುಮ, ಬೂದುಗುಂಬಕಾಯಿ, ತೆಂಗಿನ ಕಾಯಿ, ನಿಂಬೆಹಣ್ಣು, ಬಾಳೆಹಣ್ಣು, ಹೋಳಿಗೆ ಕಡುಬು ಮುಂತಾದ ಪದಾರ್ಥಗಳನ್ನು ದೇವಿಗೆ ನೈವೇದ್ಯ ಸಲ್ಲಿಸುವುದರ ಮೂಲಕ ಹಬ್ಬ ಆಚರಿಸಬೇಕು ಎಂದಿದ್ದಾರೆ.
ಭಕ್ತರು ಮತ್ತು ಬಿಸಿಲು ಮಾರಮ್ಮ ಆಡಳಿತ ಮಂಡಳಿಯು ಪ್ರಾಣಿ ಬಲಿ ತ್ಯಜಿಸಿ ಸಾತ್ವಿಕ ಪೂಜೆ ಸಲ್ಲಿಸಲು ಮುಂದಾಗಬೇಕು ಹಾಗು ದೇವಾಲಯಗಳನ್ನು ವಧಾಲಯ ಮಾಡದೆ ದಿವ್ಯಾಲಯವನ್ನಾಗಿಸಬೇಕು. ಭಕ್ತರು ಜೀವ ಹಿಂಸಾತ್ಮಕ ಪ್ರಾಣಿಬಲಿಯಂತಹ ಕ್ರೂರ ಹರಕೆಯನ್ನು ಕೈಬಿಟ್ಟು ಜೀವ ಪರವಾದ, ಮಾನವೀಯತೆಯಿಂದ ಕೂಡಿರುವ ಹರಕೆಗಳನ್ನು ಕೈಗೊಳ್ಳಬೇಕು. ಈ ಬಗ್ಗೆ ದೇವಾಲಯದ ಆಡಳಿತ ಮಂಡಳಿಯವರು ಜಾಗೃತಿ ಮೂಡಿಸಬೇಕು ಎಂದು ಅವರು ಆಗ್ರಹಿಸಿದರು.
ಪ್ರಾಣಿ ಬಲಿ 1959ರ ಕರ್ನಾಟಕ ಪ್ರಾಣಿ ಬಲಿಗಳ ಪ್ರತಿಬಂಧಕ ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ರಾಜ್ಯದಲ್ಲಿ ಸಾವಿರಾರು ದೇವಾಲಯಗಳಲ್ಲಿ ಹಬ್ಬ ಜಾತ್ರೆಗಳಲ್ಲಿ ಪ್ರತಿವರ್ಷ ಅಂದಾಜು 1 ಕೋಟಿಗೂ ಹೆಚ್ಚು ಪ್ರಾಣಿಗಳನ್ನು ಬಲಿ ನೀಡಲಾಗುತ್ತಿದೆ. ಧಾರ್ಮಿಕ ಜಗತ್ತಿನಲ್ಲಿ ಇದೊಂದು ಅತ್ಯಂತ ಆಘಾತಕಾರಿ ಬೆಳವಣಿಗೆ ಎಂದು ಸ್ವಾಮೀಜಿ ಹೇಳಿದರು