ಜಿಲ್ಲಾ ಸುದ್ದಿ

ಎಂದೆಂದಿಗೂ ಮರೆಯಲಾಗದ ನಿರ್ದೇಶಕ ಪುಟ್ಟಣ್ಣ ಕಣಗಾಲ್

ಬೆಂಗಳೂರು: ಕ್ಯಾಮೆರಾ.. ಲೈಟ್.. ಆಕ್ಷನ್! ಈ ಮಾತು ಎಲ್ಲಿಯೋ ಕೇಳಿಸಿತೇನೋ ಎನ್ನುವಂತೆ ಅಲ್ಲಿ ಮಾತುಗಳು, ನೆನಪುಗಳು. ಎಷ್ಟು ಮಾತನಾಡಿದರೂ ಮುಗಿಯದಷ್ಟು. ಪರದೆಯ ಮೇಲೆ ನೆರಳು ಬೆಳಕಿನ ಚಿತ್ರಗಳೇನೋ ಎನ್ನುವಂತೆ ಎಲ್ಲರೂ ಅಲ್ಲಿ ತೆರೆದಿಡುತ್ತಿದ್ದುದು ಮಹಾನ್ ಪ್ರತಿಭೆಯನ್ನು. ಅವರ ಮಾತು ಗಳಲ್ಲಿ ಅನಾವರಣಗೊಂಡಿದ್ದು ದಕ್ಷಿಣ ಭಾರತದ ಮಹಾನ್ ಕನ್ನಡಿಗ ನಿರ್ದೇಶಕರುಗಳ ನಿರ್ದೇಶಕ ಎಸ್.ಆರ್.ಪುಟ್ಟಣ್ಣ ಕಣಗಾಲ್ ಬಗ್ಗೆ.

ಅವರು ಗತಿಸಿ ಮೂವತ್ತು ವರ್ಷಗಳಾಗಿದ್ದರೂ ಬಣ್ಣದ ಬದುಕಿನಲ್ಲಿ ಜೀವಂತವಾಗಿರುವ ಪಾತ್ರಗಳ ಹೀರೋ ಹಿರೋಯಿನ್ ಗಳಿಗೆ ಇನ್ನೂ ಜೀವಂತ. ಅವರಿಂದ ಸೃಷ್ಟಿಗೊಂಡ ಕಲಾವಿದರು ತಮ್ಮ ಗುರುವಿಗೆ ಮಾತಿನ ಕಾಣಿಕೆ ನೀಡಿದರು. ನೆರಳುಬೆಳಕಿನ ಮಾಂತ್ರಿಕನ ಜೀವಂತ ಸಂಗಾತಿ ಪುಟ್ಟಣ್ಣ ಏನಾಗಿದ್ದರು ಎಂದು ತೆರೆದಿಟ್ಟರು. ಗೆಳೆಯರು ಗೆಳೆಯನ ಬಡತನ, ಪರಿಪೂರ್ಣತೆ ಕಡೆಗೆ, ಕಲೆಯ ಸೃಷ್ಟಿಯ ಕಡೆಗೆ ಇದ್ದ ತುಡಿತವನ್ನು ಬಿಚ್ಚಿಟ್ಟರು.

ಮಾತುಗಳು ಹಾಗಿರಲಿ, ಪ್ರದರ್ಶನಕ್ಕೆ ಇಟ್ಟಿದ್ದ ಒಂದೊಂದು ಚಿತ್ರಗಳ ಛಾಯಾಚಿತ್ರಗಳು ಒಂದು ಸಿನೆಮಾಗಾಗುವಷ್ಟು ಕಥೆ ಹೇಳುತ್ತಿದ್ದವು. ಪುಟ್ಟಣ್ಣ ತಮ್ಮ ಚಿತ್ರಕಥೆಯ ಪಾತ್ರಗಳಿಗೆ ಕಳೆ ತುಂಬಲು ಕೊಡುತ್ತಿದ್ದ ಪ್ರಾಮುಖ್ಯತೆ ಸಾರುತ್ತಿದ್ದವು. ಪುಟ್ಟಣ್ಣ ಕಾದಂಬರಿ ಚಿತ್ರಗಳ ತಾಕತ್ತು ಸಾರುವ ಸಾಹಿತಿಗಳ ಒಡನಾಟ.. (ಡಾ. ಅನುಪಮಾ ನಿರಂಜನ, ಗೊ.ರು. ರಾಮಸ್ವಾಮಿ ಅಯ್ಯಂಗಾರ್, ಮಾಸ್ತಿ ವೆಂಕಟೇಶ ಅಯ್ಯಂಗಾರ್) ತೆರೆದಿಟ್ಟವು. ಧರ್ಮಸೆರೆ, ಫಲಿತಾಂಶ, ಕಥಾಸಂಗಮ, ರಂಗನಾಯಕಿ ಹೀಗೆ ಚಿತ್ರಗಳ ಸಾಲು ಸಾಲು. ನಾಯಕ-ನಾಯಕಿಯ ರಿಚ್‍ನೆಸ್ ಸಾರುವ ಬಟ್ಟೆಗಳ ಮಾಟ, ಪ್ರಕೃತಿಯ ಚೆಲುವ ಸಾರುವ ಶೂಟಿಂಗ್ ಸ್ಪಾಟ್‍ಗಳು ಅನಾವರಣಗೊಂಡಿದ್ದವು.

ಇಂತಹ ಸಂಭ್ರಮದ ವಾತಾವರಣ ಕಂಡು ಬಂದದ್ದು ಕರ್ನಾಟಕ ಚಲನಚಿತ್ರ ಅಕಾಡೆಮಿ ಮತ್ತು ವಾರ್ತಾ ಇಲಾಖೆ ಏರ್ಪಡಿಸಿದ್ದ ಪುಟ್ಟಣ್ಣ ಕಣಗಾಲರ ಸವಿನೆನಪು ಕಾರ್ಯಕ್ರಮದಲ್ಲಿ. ಈ
ಸಂದರ್ಭದಲ್ಲಿ ಹಿರಿಯ ನಟ ಶಿವರಾಂ ಮಾತನಾಡಿ, ಇಂದು ಕನ್ನಡ ಚಿತ್ರರಂಗದಲ್ಲಿ ವರ್ಷಕ್ಕೆ 2 ಸಾವಿರ ಚಿತ್ರಗಳು ತೆರೆ ಕಾಣುತ್ತಿವೆ. ಚಿತ್ರಗಳ ಸಂಖ್ಯೆ ಬೆಳೆದರೂ, ಮೌಲ್ಯ ಬೆಳೆದಿಲ್ಲ. ಆದ್ದರಿಂದ ಇಂದಿಗೂ ಸ್ಟಾರ್ ನಿರ್ದೇಶಕ ಪುಟ್ಟಣ ಕಣಗಾಲ್ ಪ್ರಸ್ತುತವಾಗುತ್ತಾರೆ. ಅವರು ಸುಸ್ಥಿರ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದರು.

ಕಲಾವಿದರಿಂದ ಸ್ವಚ್ಛ ಭಾಷೆ, ಶಿಸ್ತನ್ನು ನಿರೀಕ್ಷಿಸುತ್ತಿದ್ದರು. ಆದರೆ, ಇಂದಿನ ಕಲಾವಿದರಿಗೆ ಅಕ್ಷರದ ಅಲ್ಪಪ್ರಾಣ- ಮಹಾಪ್ರಾಣಗಳ ಅರಿವಿಲ್ಲ. ತಂತ್ರಜ್ಞರು ಹಾಗೂ ಕಲಾವಿದರ ಅಂತಃಶಕ್ತಿಯನ್ನು ಹೊರಗೆಳೆಯುತ್ತಿದ್ದ ಮಹಾನ್ ದಿಗ್ದರ್ಶಕ. ಕಾದಂಬರಿಯನ್ನು ದೃಶ್ಯಕಾವ್ಯಕ್ಕೆ ಅಳವಡಿಸುವ ಕಲೆಗಾರಿಕೆ ಅವರಿಗೆ ಕರಗತವಾಗಿತ್ತು. ಸನ್ನಿವೇಶಗಳನ್ನು ನೆರಳು ಬೆಳಕಿನಾಟದಲ್ಲಿ ಸಾಂಕೇತಿಕವಾಗಿ ತೋರಿಸುತ್ತಿದ್ದ ಚಿತ್ರಬ್ರಹ್ಮ ಎಂದು ಬಣ್ಣಿಸಿದರು.

ಪುಟ್ಟಣ್ಣ ಕನ್ನಡ ಚಿತ್ರರಂಗಕ್ಕೆ ಕೊಡುಗೆ ಕೊಟ್ಟ ಮತ್ತೊಂದು ಪ್ರತಿಭೆ ರೆಬೆಲ್‍ಸ್ಟಾರ್ ಅಂಬರೀಷ್. ನಾಗರಹಾವು ಸಿನಿಮಾದಲ್ಲಿ `ಬುಲ್ ಬುಲ್ ಮಾತಾಡಕಿಲ್ವಾ' ಎಂದು ತೆರೆಯ ಮೇಲೆ ಬಂದು ಸ್ಟಾರ್ ಡಮ್ ಹುಟ್ಟಿಸಿ ಕೊಂಡರು. ಅಂಬರೀಷ್ ಸಹ ಕಾರ್ಯಕ್ರಮದಲ್ಲಿ ಎಲ್ಲೂ ಕಾಣಿಸಿಕೊಳ್ಳಲೇ ಇಲ್ಲ. ಈ ಸಂದರ್ಭದಲ್ಲಿ ನಾಗಲಕ್ಷ್ಮೀ ಪುಟ್ಟಣ್ಣ ಕಣಗಾಲ್ ಅವರಿಗೆ ಚಿತ್ರರಂಗದ ದಿಗ್ಗಜರು ಒಗ್ಗೂಡಿ ಸನ್ಮಾನಿಸಿದರು. ಸಚಿವ ರೋಷನ್‍ಬೇಗ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಎನ್.ನಾಗಾಂಬಿಕಾದೇವಿ, ಹಿರಿಯ ಕಲಾವಿದೆಯರಾದ ಡಾ.ಬಿ. ಸರೋಜಾದೇವಿ, ಡಾ. ಜಯಂತಿ, ನಟ ಶ್ರೀನಾಥ್ ಉಪಸ್ಥಿತರಿದ್ದರು.

SCROLL FOR NEXT