ಬೆಂಗಳೂರು: ನಗರದಲ್ಲಿ 6 ಪಥಗಳ 3 ಸಿಗ್ನಲ್ ಫ್ರೀ ಕಾರಿಡಾರ್ ರಸ್ತೆ ನಿರ್ಮಾಣಕ್ಕೆ ಸಾಧ್ಯತಾ ವರದಿ (ಡಿಎಫ್ಆರ್) ಸಿದ್ಧಪಡಿಸಲು ಜೂ.25ರೊಳಗೆ ಟೆಂಡರ್ ಕರೆಯಲು ಬಿಬಿಎಂಪಿ ಆಡಳಿತಾಧಿಕಾರಿ ಟಿ.ಎಂ. ವಿಜಯಭಾಸ್ಕರ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬಿಬಿಎಂಪಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಶೀಘ್ರದಲ್ಲಿ ಡಿಎಫ್ಆರ್ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್-ಹೆಬ್ಬಾಳದವರೆಗೆ 16ಕಿಮೀ ಉದ್ದದ ಉತ್ತರ-ದಕ್ಷಿಣ ಕಾರಿಡಾರ್, ಕೆ.ಆರ್.ಪುರ-ಗೊರಗುಂಟೆಪಾಳ್ಯವರೆಗೆ 21 ಕಿಮೀ ಉದ್ದದ ಪೂರ್ವ ಪಶ್ಚಿಮ ಕಾರಿಡಾರ್, ಜ್ಞಾನಭಾರತಿ-ವೈಟ್ ಫೀಲ್ಡ್ ವರೆಗೆ ಪೂರ್ವ-ಪಶ್ಚಿಮ ಕಾರಿಡಾರ್ ನಿರ್ಮಿಸಲು ಸರ್ಕಾರ ನಿರ್ಧರಿಸಿತ್ತು. ರು.18,500 ಕೋಟಿ ಅಂದಾಜು ವೆಚ್ಚದಲ್ಲಿ ಕಾರಿಡಾರ್ ನಿರ್ಮಾಣವಾಗಲಿದ್ದು, ರು.10 ಸಾವಿರ ಕೋಟಿ ನಿರ್ಮಾಣ ಕಾರ್ಯಗಳಿಗೆ ವೆಚ್ಚವಾಗಲಿದೆ ಸುಮಾರು ರು.25 ಕೋಟಿ ಡಿಎಫ್ಆರ್ ಗೆ ವೆಚ್ಚವಾಗಲಿದ್ದು, ನಗರೋತ್ಥಾನ ಯೋಜನೆಯಿ ಈ ಹಣವನ್ನು ಬಳಸಿ ಡಿಎಫ್ಆರ್ ಸಿದ್ಧಪಡಿಸಲಾಗುವುದು.
ಖಾಸಗಿ ಸಂಸ್ಥೆಗಳು ಕಾರಿಡಾರ್ ನಿರ್ಮಿಸುತ್ತಿದ್ದು, ಮೂರು ಕಾರಿಡಾರ್‍ಗಳಲ್ಲಿ ಟೋಲ್ ನಿರ್ಮಿಸಿ ಶುಲ್ಕ ವಿಧಿಸಲಾಗುತ್ತದೆ. ಶೀಘ್ರವಾಗಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸಭೆಯಲ್ಲಿ ಸೂಚಿಸಲಾಗಿದೆ. ಈ ಹಿಂದೆ ಕಾರಿಡಾರ್ ಯೋಜನೆ ಘೋಷಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅಂತಾರಾಷ್ಟ್ರೀಯ ಮಟ್ಟದ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಜಾಗತಿಕ ಮಟ್ಟದ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದ್ದರು. ಟೋಲ್ ಆಧಾರದಲ್ಲಿ ಕಾರಿಡಾರ್ ನಿರ್ವಹಣೆಯಾಗಲಿದ್ದು, ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಥವಾ `ಡಿಬೂಟ್' ಮಾದರಿಯಲ್ಲಿ ರಸ್ತೆ ಕಾಮಗಾರಿ ಮಾಡಲಾಗುತ್ತದೆ ಎಂದು ಪ್ರಕಟಿಸಲಾಗಿತ್ತು.
ಕಡಿಮೆ ಭೂಸ್ವಾಧೀನಕ್ಕೆ ಸೂಚನೆ: ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯ್ ಭಾಸ್ಕರ್, ಕಾರಿಡಾರ್ ನಿರ್ಮಿಸಲು ಸುಮಾರು 100 ಎಕರೆ ಭೂಸ್ವಾಧೀನ ಅಗತ್ಯವಿದೆ ಎಂದು ಪ್ರಾಥಮಿಕ ಅಧ್ಯಯನದ ಮೂಲಕ ತಿಳಿದುಬಂದಿದೆ. ಆದರೆ ಆದಷ್ಟು ಕಡಿಮೆ ಭೂಸ್ವಾಧೀನ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.