ಜಿಲ್ಲಾ ಸುದ್ದಿ

ಬೆಂಗಳೂರು ಸರಣಿ ಸರಗಳ್ಳತನ ಪ್ರಕರಣ: ಇರಾನಿ ಗ್ಯಾಂಗ್ ನ ಕೈವಾಡ

Srinivasamurthy VN

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಗುರುವಾರ ನಡೆದಿದ್ದ ಸರಣಿ ಸರಗಳ್ಳತನ ಪ್ರಕರಣಕ್ಕೆ ಪ್ರಮುಖ ತಿರುವು ದೊರೆತಿದ್ದು, ಈ ಸರಣಿ ಗಳ್ಳತನ ಮಾಡಿದ್ದು ಇರಾನಿ ಗ್ಯಾಂಗ್ ಸದಸ್ಯರೇ ಎಂದು ಹೇಳಲಾಗುತ್ತಿದೆ.

ಸರಣಿ ಸರಗಳ್ಳತನ ಪ್ರಕರಣ ಸಂಬಂಧ ನಿನ್ನೆ ಬೆಳಗಾವಿಗೆ ಹೋಗಿದ್ದ ಸಿಸಿಬಿ ಪೊಲೀಸರು ಅಲ್ಲಿ ಬಂಧನಕ್ಕೀಡಾಗಿರುವ ಇರಾನಿ ಗ್ಯಾಂಗ್ ಪ್ರಮುಖರಲ್ಲಿ ಓರ್ವನಾದ ಮೊಹಮದ್ ಇರಾನಿಯನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ವಿಚಾರಣೆ ವೇಳೆ ಆತ ಹಲವು ಮಹತ್ವದ ಮಾಹಿತಿಗಳನ್ನು ಹೊರಹಾಕಿದ್ದು, ಬೆಂಗಳೂರಿನಲ್ಲಿ ಕಳ್ಳತನ ಮಾಡಿರುವುದು ತಮ್ಮದೇ ಗ್ಯಾಂಗ್ ನ ಸದಸ್ಯರು ಎಂದು ಒಪ್ಪಿಕೊಂಡಿದ್ದಾನೆ.

ಮೊಹಮದ್ ಇರಾನಿಗೆ ಬೆಂಗಳೂರಿನಲ್ಲಿ ಸಂಗ್ರಹಿಸಲಾಗಿದ್ದ ವಿವಿಧ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ತೋರಿಸಿ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಬ್ಯಾಟರಾಯನ ಪುರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸತ್ಯನಾರಾಯಣ ಮತ್ತು ಕಲಾಸಿಪಾಳ್ಯ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಹರೀಶ್ ನಿನ್ನೆ ಬೆಳಗಾವಿಗೆ ತೆರಳಿ
ಮೊಹಮದ್ ಇರಾನಿಯನ್ನು ವಿಚಾರಣೆಗೊಳಪಡಿಸಿದ್ದರು.

ಕಳೆದ ಗುರುವಾರ ಬೆಳಗ್ಗೆ ಸುಮಾರು 7.15ರಿಂದ 10.30ರವೆರಗೆ ಬೆಂಗಳೂರಿನ ವಿವಿಧ 10ಪ್ರದೇಶಗಳಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ್ದರು. ಕಪ್ಪುಬಣ್ಣದ ಪಲ್ಸರ್ ಬೈಕ್ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರಗಳನ್ನು ಕಸಿದು ಪರಾರಿಯಾಗಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಬೆಂಗಳೂರು ಪೊಲೀಸ್ ಆಯುಕ್ತ ಎಂಎನ್ ರೆಡ್ಡಿ ಅವರು, ನಗರದಲ್ಲಿ ಗುರುವಾರ ನಡೆದಿದ್ದ 10 ಸರಣಿ ಸರಗಳ್ಳತನ ಪ್ರಕರಣಗಳ ಆರೋಪಿಗಳ ಸ್ಪಷ್ಟ ಸುಳಿವು ಸಿಕ್ಕಿದೆ. ಸಿಸಿಬಿ ಪೊಲೀಸರು ತನಿಖೆ ನಡೆಸಿ ಆರೋಪಿಗಳ ಸುಳಿವು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ ತನಿಖೆಯನ್ನು ಚುರುಕುಗೊಳಿಸಿರುವ ತನಿಖಾ ತಂಡ ಬೆಳಗಾವಿಗೆ ತೆರಳಿ ಪರಿಶೀಲನೆ ನಡೆಸುತ್ತಿದೆ ಎಂದು ಹೇಳಿದ್ದರು.

SCROLL FOR NEXT