ಜಿಲ್ಲಾ ಸುದ್ದಿ

ಬದಲಾವಣೆಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಅಣಿಗೊಳಿಸಿ: ಕಾಗೋಡು ತಿಮ್ಮಪ್ಪ

ರಾಮನಗರ: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆ ಹಾಗೂ ಸಾಗುತ್ತಿರುವ ವೇಗಕ್ಕೆ ನಮ್ಮ ವಿದ್ಯಾರ್ಥಿಗಳನ್ನು ಅಣಿಗೊಳಿಸುವುದು ಶಿಕ್ಷಣ ಸಂಸ್ಥೆಗಳ ಕರ್ತವ್ಯ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಕರೆ ನೀಡಿದ್ದಾರೆ.

ಮಾಗಡಿ ತಾಲೂಕಿನ ಸೋಲೂರಿನಲ್ಲಿ ಬ್ಯಾಂಕಿಂಗ್ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಉಚಿತ ತರಬೇತಿ ನೀಡುವ ಉದ್ದೇಶದಿಂದ ಪ್ರಾರಂಭಿಸಿರುವ ಆರ್. ಎಲ್.ಜಾಲಪ್ಪ ಅಕಾಡೆಮಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕಲಿತವರೆಲ್ಲ ನಿಸ್ವಾರ್ಥಿಗಳಾಗಿ ತಮ್ಮ ಪಾಡಿನ ಕೆಲಸ ಮಾಡಿದರೆ ಸುಭಿಕ್ಷ ಮತ್ತು ಸುಂದರನಾಡು ಕಟ್ಟುವುದು ಕಷ್ಟದ ಕೆಲಸವಲ್ಲ. ಮನುಷ್ಯನಲ್ಲಿ ಸ್ವಾರ್ಥ ಹೆಚ್ಚಿದೆ. ಎಲ್ಲರಲ್ಲೂ ತಾನು, ತನ್ನದೆನ್ನುವುದು ಮನೆ ಮಾಡಿದೆ. ನನ್ನ ಹಿಂದೆ ಸಮಾಜ, ರಾಜ್ಯ, ರಾಷ್ಟ್ರವಿದೆ ಎನ್ನುವುದನ್ನೇ ಮರೆತಿದ್ದಾರೆ ಎಂದು ಅವರು ವಿಷಾದಿಸಿದರು.

ಕೆಲವರು ಶಿಕ್ಷಣ ದಾಸೋಹದ ಹೆಸರಲ್ಲಿ ವೈದ್ಯ, ಎಂಜಿನಿಯರಿಂಗ್ ಕಾಲೇಜುಗಳನ್ನು ಪ್ರಾರಂಭಿಸಿದ್ದಾರೆ. ಆದರೆ, ಆರ್.ಎಲ್. ಜಾಲಪ್ಪ ಅವರ ಪ್ರಜ್ಞಾವಂತಿಕೆ ಮತ್ತು ದೂರದೃಷ್ಟಿತ್ವದ ಫಲವಾಗಿ ಸೋಲೂರಿನಲ್ಲಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಬ್ಯಾಂಕಿಂಗ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಪ್ರಾರಂಭವಾಗಿದೆ ಎಂದು ಕಾಗೋಡು ತಿಮ್ಮಪ್ಪ ಪ್ರಶಂಸಿಸಿದರು.

ಹಿಂದುಳಿದ ವರ್ಗಗಳ ಮಠ ಮಾನ್ಯಗಳು ಸಾಮಾಜಿಕ ನ್ಯಾಯದ ಕೇಂದ್ರಗಳಾಗಿ ಪರಿವರ್ತನೆಗೊಳ್ಳಬೇಕು. ಹಿಂದುಳಿದವರಿಗಾಗಿ ಸ್ಥಾಪಿಸಿರುವ ಆರ್.ಎಲ್.ಜಾಲಪ್ಪ ಅಕಾಡೆಮಿಯಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಲ್ಪ ಸಂಖ್ಯಾತರಿಗೂ ತರಬೇತಿ ವಿಸ್ತರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಸಲಹೆ ನೀಡಿದರು.

ರಾಜ್ಯದಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯೇ ಮರೆಯಾಗಿತ್ತು. ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರು ನೊಂದವರ ಧ್ವನಿಯಾಗಿ ಕೆಲಸ ಮಾಡಿದರು. ಅವರ ಹಾದಿಯಲ್ಲೇ ಸಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾನಾ ಯೋಜನೆಗಳ ಜಾರಿಯೊಂದಿಗೆ ದುರ್ಬಲರು, ಶೋಷಿತರಿಗಾಗಿ ಶ್ರಮಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ಶ್ಲಾಘಿಸಿದರು. ನಮ್ಮವರು ದಡ್ಡರಲ್ಲ: ಹಿಂದುಳಿದ ವರ್ಗದ ಮಕ್ಕಳು ದಡ್ಡರಲ್ಲ. ಅವಕಾಶಗಳು ಸಿಕ್ಕರೆ ಇವರೂ ಸರಿಸಮನಾಗಿ ನಿಲ್ಲುವರು. ಅದಕ್ಕೆಂದೇ ಈ ತರಬೇತಿ ಅಕಾಡೆಮಿ ಪ್ರಾರಂಭವಾಗಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರ್ಕಾರದ ಆಶೀರ್ವಾದ ಅಗತ್ಯ. ಒಳ್ಳೆಯ ಕೆಲಸಕ್ಕೆ ಯಾರೂ ಅಡ್ಡಿಪಡಿಸಬೇಡಿ ಎಂದರು.

SCROLL FOR NEXT