ಜಿಲ್ಲಾ ಸುದ್ದಿ

ಅಕ್ರಮ ಸಕ್ರಮ ಮಾಹಿತಿಗೆ ಹೈಕೋರ್ಟ್ ಸೂಚನೆ

Mainashree

ಬೆಂಗಳೂರು: ನಗರದಲ್ಲಿರುವ ಅಕ್ರಮ ಕಟ್ಟಡಗಳು ಮತ್ತು ತೆರವುಗೊಳಿಸಬೇಕಾದ ಅಕ್ರಮ
ಕಟ್ಟಡಗಳ ಮಾಹಿತಿ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಸರ್ಕಾರದ ಬಹು ನಿರೀಕ್ಷಿತ ಅಕ್ರಮ-ಸಕ್ರಮ ಯೋಜನೆ ರದ್ದು ಪಡಿಸುವಂತೆ ಕೋರಿ ನಮ್ಮ ಬೆಂಗಳೂರು ಪ್ರತಿಷ್ಠಾನ ಹೈಕೋರ್ಟ್‍ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿತ್ತು.

ಈ ಕುರಿತು ಸೋಮವಾರ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾ.ಎಸ್.ಕೆ.ಮುಖರ್ಜಿ ಮತ್ತು ನ್ಯಾ. ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ಪೀಠ, ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸುವಂತೆ ಕೋರಿ ವಿಚಾರಣೆ ಮುಂದೂಡಿದೆ.

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಪ್ರೋ.ರವಿವರ್ಮ ಕುಮಾರ್ ವಾದ ಮಂಡಿಸಿ, ಕಾನೂನಿನ ಪರಿಮಿತಿಯಲ್ಲಿ ಅವಕಾಶವಿರುವ ಕಟ್ಟಡ ಗಳನ್ನು ಮಾತ್ರ ಸಕ್ರಮಗೊಳಿಸಲಾಗುತ್ತದೆ.

ಅಕ್ರಮವಾಗಿ ನಿರ್ಮಾಣ ಮಾಡಿರುವ ಕಟ್ಟಡಗಳು ತೆರಿಗೆ ನೀಡದೆ ತಪ್ಪಿಸಿಕೊಳ್ಳುತ್ತಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದ್ದು, ಅಕ್ರಮ-ಸಕ್ರಮ ಯೋಜನೆ ಜಾರಿ ಮಾಡುವುದೊಂದೇ ಇದಕ್ಕೆ ಪರಿಹಾರವಾಗಿದೆ ಎಂದು ಎಜಿ ವಿಭಾಗೀಯ ಪೀಠದ ಗಮನಕ್ಕೆ ತಂದರು.

ಅರ್ಜಿದಾರರ ಪರ ಹಿರಿಯ ವಕೀಲ ಸಜ್ಜನ್ ಪೂವಯ್ಯ ವಾದ ಮಂಡಿಸಿ, ಅಕ್ರಮ-ಸಕ್ರಮ ಯೋಜನೆ ಸಂವಿಧಾನಕ್ಕೆ ವಿರುದ್ಧವಾಗಿದೆ. ಈ ಯೋಜನೆ ಕಾನೂನು ಉಲ್ಲಂಘನೆ ಮಾಡಿದವರಿಗೆ ಯಾವುದೇ ಶಿಕ್ಷೆ ನೀಡದೆ ಅವರನ್ನು ರಕ್ಷಿಸಿದಂತಾಗುತ್ತದೆ. ಈ ಮೂಲಕ ಕಾನೂನು ಉಲ್ಲಂಘಿಸಿದವರ ರಕ್ಷಣೆಗೆ ಸರ್ಕಾರ ಮುಂದಾಗುತ್ತಿದೆ.

ವಸತಿ ವಲಯದಲ್ಲಿ ಶೇ.50ರಷ್ಟು ಉಲ್ಲಂಘನೆ ಆಗಿರುವ ಕಟ್ಟಡ ಸಕ್ರಮಗೊಳಿಸುವುದಿಲ್ಲ ಎಂದು ಯೋಜನೆ ತಿಳಿಸುತ್ತದೆ. ಆದರೆ, ಶೇ.50 ಉಲ್ಲಂಘನೆ ಕುರಿತು ಸರ್ಕಾರ ಅನುಸರಿಸುತ್ತಿರುವ
ಮಾನದಂಡದ ಬಗ್ಗೆ ಈವರೆಗೂ ಮಾಹಿತಿ ದೊರೆತಿಲ್ಲ. ಮಾತ್ರವಲ್ಲ, ಈ ಯೋಜನೆ ಜಾರಿ ಮಾಡುವುದರಿಂದ ಮೂಲ ಉದ್ದೇಶಿತ ಬಳಕೆಗೆ ಹೊರತುಪಡಿಸಿ ಅನ್ಯ ಉದ್ದೇಶಕ್ಕೆ ಬಳಸುತ್ತಿರುವ ಕಟ್ಟಡಗಳು ಸಕ್ರಮ ಗೊಳಿಸಬಹುದಾದ ಸಾಧ್ಯತೆ ಇದೆ.

ಇದರಿಂದ ಕಾನೂನು ಪಾಲನೆ ಮಾಡಿ ವಸತಿ ನಿರ್ಮಾಣ ಮಾಡಿರುವರು ಸಾಕಷ್ಟು ತೊಂದರೆ ಅನುಭವಿಸಲಿದ್ದು, ಗಾಳಿ ಬೆಳಕಿನಿಂದ ವಂಚಿತರಾಗಿದ್ದಾರೆ. ಕಾನೂನು ಪಾಲಿಸಿದವರನ್ನು ಮತ್ತು ಕಾನೂನು ಉಲ್ಲಂಘಿಸಿದವರನ್ನು ಒಂದೇ ತಕ್ಕಡಿಯಲ್ಲಿಟ್ಟು ನೋಡುವುದು ಸರಿಯಲ್ಲ ಎಂದು ವಾದ ಮಂಡಿಸಿದರು. ವಾದ ವಿವಾದ ಆಲಿಸಿದ ವಿಭಾಗೀಯ ಪೀಠ, ಈ ಕುರಿತು ಆಕ್ಷೇಪಣೆ ಸಲ್ಲಿಸು ವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿದೆ.

SCROLL FOR NEXT