ಜಿಲ್ಲಾ ಸುದ್ದಿ

ಬಿಎಂಟಿಸಿ ಚಾಲಕನಿಗೆ ಮೂರ್ಛೆ, ತಪ್ಪಿದ ಅನಾಹುತ

ಬೆಂಗಳೂರು: ಚಲಿಸುತ್ತಿದ್ದ ಬಿಎಂಟಿಸಿ ಬಸ್ಸಿನಲ್ಲಿ ಚಾಲಕನಿಗೆ ಮೂರ್ಛೆ (ಫಿಟ್ಸ್) ರೋಗ ಜಾಗೃತವಾದ ಪರಿಣಾಮ ನಿಯಂತ್ರಣ ತಪ್ಪಿದ ಬಸ್ಸು 3 ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಕೆಲವರಿಗೆ ಗಾಯವಾಗಿದ್ದು, ಭಾರಿ ದುರಂತ ತಪ್ಪಿದೆ.

ಯಲಹಂಕದಿಂದ ಸಿಟಿ ಮಾರುಕಟ್ಟೆಗೆ ಸಂಚರಿಸುವ ಬಸ್ ಅನ್ನು ಚಾಲಕ ವೆಂಕಟೇಶ್ ಚಲಾಯಿಸುತ್ತಿದ್ದರು. ಮ.1.30ರ ಸುಮಾರಿಗೆ ಬಳ್ಳಾರಿ ರಸ್ತೆ ಕೊಲಂಬಿಯಾ ಏಷಿಯಾ ಆಸ್ಪತ್ರೆ ಬಳಿ ಬರುತ್ತಿದ್ದಾಗ ಚಾಲಕನಿಗೆ ಮೂರ್ಛೆ ಬಂದಿದೆ. ಪ್ರಜ್ಞೆ ತಪ್ಪಿದ ಅವರು ಕುಸಿದು ಬಿದ್ದಿದ್ದಾರೆ. ನಿಯಂತ್ರಣ ತಪ್ಪಿದ ಬಸ್ ಏಕಾಏಕಿ ಅತ್ತಿತ್ತ ಚಲಿಸುತ್ತಿರುವುದು ಹಾಗೂ ಚಾಲಕ ಕುಸಿದಿರುವುದನ್ನು ಗಮನಿಸಿದ ಪ್ರಯಾಣಿಕರು ಜೋರಾಗಿ ಕೂಗಾಡಲು ಆರಂಭಿಸಿದ್ದಾರೆ. ಅಷ್ಟರಲ್ಲಾಗಲೇ ಅಡ್ಡಾದಿಡ್ಡಿ ಚಲಿಸುತ್ತ ಬಸ್ ಮುಂದೆ ಹೋಗುತ್ತಿದ್ದ ಆಟೋ ಹಾಗೂ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಹಾಗೆಯೇ ಚಲಿಸುತ್ತಿತ್ತು. ಈ ವೇಳೆ ಪ್ರಯಾಣಿಕರ ಕೂಗಾಟದಿಂದ ಓಡಿ ಬಂದ ನಿರ್ವಾಹಕ ತಿಮ್ಮಾ ರೆಡ್ಡಿ, ಚಾಲಕ ವೆಂಕಟೇಶ್ ಅವರನ್ನು ಬದಿಗೆ ಸರಿಸಿ ಬ್ರೇಕ್ ಹಿಡಿದಿದ್ದಾರೆ.

ಆದರೆ, ದಿಢೀರ್ ಬ್ರೇಕ್ ಹಿಡಿದ ಕಾರಣ ಹಿಂದಿನಿಂದ ಬರುತ್ತಿದ್ದ ಕಾರೊಂದು ಬಸ್ಸಿಗೆ ಡಿಕ್ಕಿ ಹೊಡೆದಿದೆ. ಸರಣಿ ಅಪಘಾತದಲ್ಲಿ ಬೈಕ್ ಸವಾರ ಗೋಪಾಲ್, ಆಟೋ ಚಾಲಕ ಸೊಹೈಲ್ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇಬ್ಬರಿಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಮೂರ್ಛೆ ರೋಗದಿಂದ ತಲೆ ಸುತ್ತಿಬಿದ್ದಿದ್ದ ಚಾಲಕ ವೆಂಕಟೇಶ್ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಬ್ಬಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂರ್ಛೆ ಇದೇ ಮೊದಲು: ಎರಡು ವರ್ಷಗಳಿಂದ ಚಾಲಕ ವೆಂಕಟೇಶ್ ಜತೆ ಕೆಲಸ ಮಾಡುತ್ತಿದ್ದೇನೆ. ಈತನಿಗೆ ಮೂರ್ಛೆ ಬಂದಿರುವುದು ಇದೇ ಮೊದಲು ಎಂದು ನಿರ್ವಾಹಕ ತಿಮ್ಮಾರೆಡ್ಡಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ವೆಂಕಟೇಶನಿಗೆ ಮೊದಲ ಬಾರಿ ಮೂರ್ಛೆ ರೋಗ ಕಾಣಿಸಿಕೊಂಡಿದೆ. ಈ ಹಿಂದೆ ಈ ರೀತಿ ಆಗಿರುವ ಉದಾಹರಣೆ ಇಲ್ಲ ಎಂದು ಬಿಎಂಟಿಸಿ ಸಾರ್ವಜನಿಕ ಸಂಪರ್ಕಾಧಿಕಾರಿ ಹೇಳಿದ್ದಾರೆ.

ಮೂರ್ಛೆ ರೋಗಕ್ಕೆ ನೂರಾರು ಕಾರಣಗಳಿವೆ. ಆದರೆ, ವಯಸ್ಕರಲ್ಲಿ ದಿಢೀರ್ ಎಂದು ಮೂರ್ಛೆ ರೋಗ ಬರಲು ನರ ಸೋಂಕು, ಮೆದುಳಿನಲ್ಲಿ ಗೆಡ್ಡೆ, ಮಾದಕದ್ರವ್ಯ ಅಥವಾ ವ್ಯಸನಗಳನ್ನು ದಿಢೀರ್ ಬಿಡುವುದರಿಂದ ಅಥವಾ ಹೆಚ್ಚಿನ ಸೇವನೆಯಿಂದ ಬರುವ ಸಾಧ್ಯತೆ ಇರುತ್ತದೆ.
-ಡಾ. ವೈಜಯಂತಿ, ಸಹ ಪ್ರಾಧ್ಯಾಪಕರು,
ಎಂ.ಎಸ್ ರಾಮಯ್ಯ ವೈದ್ಯಕೀಯ
ಕಾಲೇಜು ಮತ್ತು ಆಸ್ಪತ್ರೆ


ವೈದ್ಯಕೀಯ ಪರೀಕ್ಷೆ ಬೇಕು
ಭಾರಿ ವಾಹನಗಳ ಚಾಲಕರಿಗೆ ಅದರಲ್ಲೂ ಪ್ರಯಾಣಿಕ ವಾಹನಗಳ ಚಾಲಕರಿಗೆ ವರ್ಷಕ್ಕೊಮ್ಮೆ ಅಥವಾ 2 ವರ್ಷಗಳಿಗೊಮ್ಮೆ ದೈಹಿಕ ಸಾಮರ್ಥ್ಯ ಹಾಗೂ ವೈದ್ಯಕೀಯ ಪರೀಕ್ಷೆ ಕಡ್ಡಾಯವಾಗಿ ಮಾಡಿಸಬೇಕು. ಬಸ್ ಚಾಲನೆಯಲ್ಲಿ ನೂರಾರು ಮಂದಿಯ ಜೀವಗಳು ಚಾಲಕನ ಕೈಯಲ್ಲಿ ಇರುತ್ತದೆ. ಹೀಗಾಗಿ, ಸರ್ಕಾರಿ ಹಾಗೂ ಖಾಸಗಿ ಬಸ್‍ಗಳ ಚಾಲಕರ ವೈದ್ಯಕೀಯ ಪರೀಕ್ಷೆ ನಿರಂತರವಾಗಿ ಮಾಡಿಸುತ್ತಿರಬೇಕು ಎನ್ನುತ್ತಾರೆ ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಹ ಪ್ರಾಧ್ಯಾಪಕರಾದ ಡಾ. ವೈಜಯಂತಿ.

SCROLL FOR NEXT