ಬೆಂಗಳೂರು: ಕೆಲ ದಿನಗಳ ಹಿಂದೆ ನಗರದ ಮಹಿಳೆಯರನ್ನು ಬೆಚ್ಚಿಬೀಳಿಸಿದ ಸರಗಳ್ಳರ ಹಾವಳಿ ಮಟ್ಟಹಾಕಲು ಪೊಲೀಸರು ಯತ್ನಿಸುತ್ತಿರುವ ನಡುವೆಯೇ ಸರಗಳ್ಳತನ ಪ್ರಕರಣಗಳು ಮುಂದುವರಿದಿವೆ.
ಪಲ್ಸರ್ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಹಿಳೆಯರ ಸರ ದೋಚಿರುವ ಘಟನೆ ಕತ್ರಿಗುಪ್ಪೆ ವಾಟರ್ ಟ್ಯಾಂಕ್ ಸಮೀಪ ಭಾನುವಾರ ರಾತ್ರಿ ನಡೆದಿದೆ.
ವಾಟರ್ ಟ್ಯಾಂಕ್ ಸಮೀಪದ 4ನೇ ಮುಖ್ಯ ನಿವಾಸಿ ಲಲಿತಮ್ಮ(49) ಸರ ಕಳೆದುಕೊಂಡವರು. ರಾತ್ರಿ ಸುಮಾರು 8.45ರ ವೇಳೆಗೆ ಘಟನೆ ನಡೆದಿದ್ದು, 60 ಗ್ರಾಂ ಸರ ಕಳವಾಗಿದೆ.
ಬೈಕ್ ಚಾಲನೆ ಮಾಡುತ್ತಿದ್ದ ವ್ಯಕ್ತಿ ಹೆಲ್ಮೆಟ್ ಧಾರಿಯಾಗಿದ್ದ ಹಾಗೂ ಹಿಂಬದಿ ಸವಾರ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ. ಹಾಗಾಗಿ ಮಹಿಳೆಗೆ ಅವರ ಗುರುತು ಸಿಕ್ಕಿಲ್ಲ. ಘಟನೆ ನಡೆದಾಗ ಅವರ ಎರಡು ಕೈಯಲ್ಲೂ ತರಕಾರಿಯ ಬ್ಯಾಗ್ ಗಳಿದ್ದವು. ಹಾಗಾಗಿ ಸರ ಹಿಡಿದುಕೊಳ್ಳಲು ಆಗಿಲ್ಲ.ರಾತ್ರಿಯಾದ್ದರಿಂದ ಆ ರಸ್ತೆಯಲ್ಲಿ ಜನಸಂಚಾರ ವಿರಳವಿದ್ದುದನ್ನು ಕಂಡ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಯಾವುದೇ ಸಿಸಿಟಿವಿ ಇಲ್ಲ. ಕತ್ತಲಾಗಿದ್ದ ಕಾರಣ ಬೈಕ್ ನಂಬರ್ ಸಹ ಯಾರಿಗೂ ಕಂಡಿಲ್ಲ. ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಗಳ್ಳರ ಗುರುತಿಗೆ ಕಲರ್ ವರ್ಗೀಕರಣ
ರೆಡ್, ಬ್ಲೂ, ಗ್ರೀನ್...
ಇವು ಕೇವಲ ಬಣ್ಣ ಮಾತ್ರವಲ್ಲ, ಇನ್ನು ಕೆಲವೇ ದಿನಗಳಲ್ಲಿ ಈ ಕಲರ್ ಗಳ ಹೆಸರಿನಲ್ಲಿ ಸರಗಳ್ಳರು ಗುರುತಿಸಲ್ಪಡುತ್ತಾರೆ.
ಹೌದು, ಈ ಮೂರು ಬಣ್ಣಗಳಡಿ ನಗರದ ಮೂರು ವಿಭಾಗಗಳ ಸರಗಳ್ಳರನ್ನು ಪತ್ತೆ ಮಾಡಿ, ಅವರ ಚಲನವಲನದ ಮೇಲೆ ನಿಗಾವಹಿಸುವ ಮೂಲಕ ನಗರದಲ್ಲಿ ಹೆಚ್ಚುತ್ತಿರುವ ಸರಗಳ್ಳತನ ನಿಯಂತ್ರಣಕ್ಕೆ ಪೊಲೀಸರು ಸಜ್ಜಾಗುತ್ತಿದ್ದಾರೆ. ಈಗಾಗಲೇ ಅಂತಹ ಕಳ್ಳರ ಪಟ್ಟಿ ಮಾಡುವಂತೆ ಪೂರ್ವ, ಈಶಾನ್ಯ ಹಾಗೂ ವಾಯುವ್ಯ ವಿಭಾಗದ ಎಲ್ಲಾ ಡಿಸಿಪಿ, ಎಸಿಪಿ ಹಾಗೂ ಸಂಬಂಧಪಟ್ಟ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಗಳಿಗೆ ಸೂಚನೆ ನೀಡಲಾಗಿದೆ.
ಏನಿದು ಕಲರ್ ಪಟ್ಟಿ?: ಮೊದಲನೆಯದಾಗಿ, ಪ್ರತಿ ಠಾಣೆ ವ್ಯಾಪ್ತಿಯಲ್ಲಿನ ಸರಗಳ್ಳರನ್ನು ಪಟ್ಟಿ ಮಾಡಲಾಗುವುದು. ಅವರಲ್ಲಿ ನಗರದಲ್ಲಿ ಇರುವವರು ಯಾರು, ಇಲ್ಲಿಂದ ಕಾಲ್ಕಿತ್ತಿರುವವರು ಯಾರು, ಜೈಲಿನಲ್ಲಿರುವವರು ಯಾರು ಎಂಬುದನ್ನು ಪ್ರತ್ಯೇಕಿಸಿ, ಗಣತಿ ಮಾಡಲಾಗುತ್ತದೆ. ನಂತರ ಅವರ ಮನೆಗಳಿಗೆ ಭೇಟಿ ನೀಡಿ ವಿಚಾರಣೆ ನಡೆಸಲಾಗುವುದು ಹಾಗೂ ಅವರ ಮೇಲೆ ಹದ್ದಿನ ಕಣ್ಣಿಡಲಾಗುವುದು.
ಪರಾರಿಯಾಗಿರುವವರು -ಕೆಂಪು, ಜೈಲಿನಲ್ಲಿರುವವರು-ನೀಲಿ, ನಗರದಲ್ಲಿರುವವರು-ಹಸಿರು, ಈ ಬಣ್ಣಗಳಿಂದ ಅವರನ್ನು ಗುರುತಿಸಲಾಗುವುದು. ಆಗ ಸರಗಳ್ಳರ ಪತ್ತೆ ಸುಲಭವಾಗುತ್ತದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಪಿ. ಹರಿಶೇಖರನ್ ತಿಳಿಸಿದ್ದಾರೆ.