ಬೆಂಗಳೂರು: ಡಾ ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ವಾಲ್ಮಿಕಿ ಅಭಿವೃದ್ಧಿ ನಿಗಮಗಳ ಅಧಿಕಾರವನ್ನು ಮೊಟಕುಗೊಳಿಸಿರುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ದಲಿತ ಸಂಘಟನೆಗಳ ಸಮನ್ವಯ ಸಮತಿ ಮುಖಂಡ ಎನ್.ಮೂರ್ತಿ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಳಿಗಾಗಿ ಈ ಎರಡು ನಿಗಮಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ರಾಜ್ಯ ಸರ್ಕಾರ ಇತ್ತೀಚೆಗಷ್ಟೆ ನಿಗಮದ ಅಧ್ಯಕ್ಷರಿಗೆ ಇರುವ ಅಧಿಕಾರವನ್ನು ಮೊಟಕುಗೊಳಿಸಿ, ದಲಿತರ ಮೇತೆ ದೌರ್ಜನ್ಯವೆಸಗುತ್ತಿದೆ ಎಂದು ಆರೋಪಿಸಿದ್ದಾರೆ.
ಸಿದ್ದರಾಮಯ್ಯನವರು ನಾನು ಒಬ್ಬ ದಲಿತ ಎಂದು ಹೇಳಿದರೇ ಹೊರತು, ದಲಿತರ ಅಭಿವೃದ್ಧಿ ಕೆಲಸಗಳನ್ನು ಮಾಡದೆ, ಅವರಿಗೆ ಇರುವಂತಹ ಸೌಲಭ್ಯಗಳನ್ನು ಕಸಿಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸರ್ಕಾರದ ಧೋರಣೆ ವಿರುದ್ಧ ಎಲ್ಲಾ ದಲಿತ ಸಂಘಟನೆಗಳು ಒಟ್ಟಾಗಿ ಪ್ರತಿಭಟನೆ ನಡೆಸಲು ಮುಂದಾಗಿದೆ. ಅಧಿವೇಶನ ನಡೆಯುವ ಸಂದರ್ಭದಲ್ಲಿ ಜೂನ್ 29 ರಂದು ಸುವರ್ಣಸೌಧದ ಮುಂದೆ ಹಾಗೂ ಎಲ್ಲಾ ಜಿಲ್ಲೆಗಳಲ್ಲಿನ ಜಿಲ್ಲಾ ವ್ಯವಸ್ಥಾಪಕರ ಕಛೇರಿಗಳ ಮುಂದೆ ತಮಟೆ ಚಳವಳಿ ನಡೆಸಿ ಧರಣಿ ನಡೆಸಲಾಗುವುದು ಎಂದು ಹೇಳಿದ್ದಾರೆ.