ಜಿಲ್ಲಾ ಸುದ್ದಿ

ಅಂತಾರಾಜ್ಯ ಗಂಧ ಕಳ್ಳ ಸೆರೆ

Srinivas Rao BV

ಬೆಂಗಳೂರು: ಬೆಲೆ ಬಾಳುವ ಶ್ರೀಗಂಧದ ಮರಗಳನ್ನು ಕಡಿದು ಕಳ್ಳಸಾಗಣೆ ಮಾಡುತ್ತಿದ್ದ ಕುಖ್ಯಾತ ಅಂತಾರಾಜ್ಯ ಕಳ್ಳನೊಬ್ಬನನ್ನು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ.

ಥಣಿಸಂದ್ರ ಮುಖ್ಯರಸ್ತೆ ಸಾರಾಯಿಪಾಳ್ಯ ನಿವಾಸಿ ಇಮ್ದಾದ್ ವುಲ್ಲಾ(23 )  ಬಂಧಿತ. ಆರೋಪಿಯಿಂದ 20 ಲಕ್ಷ ಮೌಲ್ಯದ ಗಂಧದ ಮರದ ತುಂಡುಗಳು ಹಾಗೂ 1 ಕಾರನ್ನು ವಶಕ್ಕೆ ಪಡೆಯಲಾಗಿದೆ.

ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ) ಸ್ಯಾಂಕಿ ಕೆರೆ ಆವರಣ ಮತ್ತು ಕನ್ನಿಂಗ್ ಹ್ಯಾಮ್ ರಸ್ತೆಗಳಲ್ಲಿ ಗಂಧದ ಮರ ಕಳವು ಮಾಡಿದ್ದ 3 ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಚೋರಶೈಲಿ: ಆರೋಪಿ ಇಮ್ದಾದ್ ವುಲ್ಲಾನ ತಂದೆ ಅಮ್ಜದ್ ವುಲ್ಲಾ ಕೂಡಾ ಈ ಹಿಂದೆ ಗಂಧದ ಮರ ಕಳವು ಹಾಗೂ ಮಾರಾಟ ಜಾಲ ನಡೆಸುತ್ತಿದ್ದ. ಆತನಿಗೆ ವಯಸ್ಸಾದ ಕಾರಣ ಕೃತ್ಯ ನಿಲ್ಲಿಸಿದ್ದ. ಆದರೆ ತಂದೆಯ ಕೃತ್ಯವನ್ನು ಮಗ ಮುಂದುವರೆಸಿದ್ದ. ಹಗಲಿನಲ್ಲಿ ಗಂಧದ ಮರಗಳಿರುವ ಸ್ಥಳಗಳನ್ನು ಗುರುತಿಸುತ್ತಿದ್ದ ಆರೋಪಿ, ರಾತ್ರಿ ವೇಳೆ ಮರ ಕಡಿದು ಸಾಗಿಸುತ್ತಿದ್ದ. ಮರಗಳನ್ನು ಕಡಿಯಲು ತಮಿಳುನಾಡಿನಿಂದ ಕೂಲಿ ಕಾರ್ಮಿಕರನ್ನು ಕರೆತರುತ್ತಿದ್ದ. ಒಂದು ರಾತ್ರಿ ಮರ ಕಡಿದರೆ ಅವರಿಗೆ 2  ಸಾವಿರ ರೂಪಾಯಿ ನೀಡುತ್ತಿದ್ದ. ಮರ ಕದಿಯುವ ಕಾರ್ಮಿಕರು ಬಳಿಕ ಆರೋಪಿ ಹೇಳಿದ ಜಾಗಕ್ಕೆ ಸಾಗಿಸುತ್ತಿದ್ದರು. ಹಣ ಪಡೆದು ವಾಪಸ್ ತಮಿಳುನಾಡಿಗೆ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನಾಕಾಬಂದಿ ವೇಳೆ ಸುಳಿವು: ಸರಗಳ್ಳರ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ನಗರದಲ್ಲಿ ನಾಕಾಬಂದಿ ಹಾಕಿದ್ದ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಹೈ ಗ್ರೌಂಡ್ಸ್ ವಾಹನ ಪರಿಶೀಲನೆ ನಡೆಸುತ್ತಿದ್ದಾಗ ಅನುಮಾಸ್ಪದವಾಗಿ ಹುಂಡೈ ಅಸೆಂಟ್ ಕಾರು ಬಂದಿದೆ. ಕಾರು ನಿಲ್ಲಿಸುವಂತೆ ಪೊಲೀಸರು ಸೂಚಿಸಿದರು ಆರೋಪಿ ಕಾರನ್ನು ವೇಗವಾಗಿ ಚಲಾಯಿಸಿ ಪರಾರಿಯಾಗಿದ್ದ. ಆದರೆ ಕಾರಿನ ನೋಂದಣಿಯ ಸಂಖ್ಯೆಯನ್ನು ಬರೆದುಕೊಂಡಿದ್ದ ಪೊಲೀಸರು, ಸಾರಿಗೆ ಇಲಾಖೆಗೆ ಕಳಿಸಿ ವಿಳಾಸ ಕೋರಿದ್ದರು. ವಿಳಾಸ ಪಡೆದು ಇಮ್ದಾದ್ ವುಲ್ಲಾ ನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಗಂಧದ ಮರ ಕಳವು ವಿಚಾರ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

SCROLL FOR NEXT