ದಾವಣಗೆರೆ: ರೈತರ ಕಬ್ಬಿನ ಬಾಕಿ ಹಣ ಪಾವತಿಸದ ಸಕ್ಕರೆ ಕಾರ್ಖಾನೆಗಳ ಸಕ್ಕರೆ ಮುಟ್ಟುಗೋಲು ಹಾಕಿಕೊಂಡಿದ್ದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಎಪಿಎಂಸಿ ಸಚಿವ ಹಾಗೂ ಶಾಮನೂರು ಗ್ರೂಪ್ ಆಫ್ ಇಂಡಸ್ಟ್ರೀಸ್ ಮುಖ್ಯಸ್ಥ ಡಾ. ಶಾಮನೂರು ಶಿವಶಂಕರಪ್ಪ, ಹಣ ಪಾವತಿ-ಸಲು ಕಾರ್ಖಾನೆಗಳಿಗೆ ಸೆಪ್ಟೆಂಬರ್ ವರೆಗೆ ಕಾಲಾವಕಾಶ ನೀಡಬೇಕು ಎಂದು ಹೇಳಿದರು. ಕಾರ್ಖಾನೆಗಳ ಸಕ್ಕರೆ ಜಪ್ತಿ ಮಾಡುವುದು ಅಥವಾ ಸಕ್ಕರೆ ದಾಸ್ತಾನು ಮುಟ್ಟುಗೋಲು ಸರಿಯಾದ ಕ್ರಮವಲ್ಲ. ಸರ್ಕಾರದ ಕ್ರಮದಿಂದ ಕಬ್ಬಿನ ಬಾಕಿ ಉಳಿಸಿಕೊಂಡ ಕಾರ್ಖಾನೆಗಳ ಮಾಲೀಕರು ರೈತರಿಗೆ ಮತ್ತಷ್ಟು ಕಿರುಕುಳ ನೀಡುವ ಸಾಧ್ಯತೆ ಇದೆ. ಆ ಮೂಲಕ ಸರ್ಕಾರವೇ ರೈತರ ಆತ್ಮಹತ್ಯೆಯ ಹೆಚ್ಚಳಕ್ಕೂ ಕಾರಣವಾಗಲಿದೆ ಎಂದು ಹೇಳಿದರು.
ಸಕ್ಕರೆ ಕಾರ್ಖಾನೆಗೆ ಸಂಬಂಧವಿಲ್ಲ
ಬೆಂಗಳೂರು: ವಿಜಯಪುರ ಜಿಲ್ಲೆಯ ಬಸವೇಶ್ವರ ಶುಗರ್ಸ್ ಫ್ಯಾಕ್ಟರಿಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ. ಕಬ್ಬು ಬೆಳೆಗಾರರ ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳಲ್ಲಿ ಬಹುತೇಕವು ವಿವಿಧ ಪಕ್ಷಗಳಿಗೆ ಸೇರಿದ ರಾಜಕಾರಣಿಗಳ ಒಡೆತನದಲ್ಲಿದ್ದು ಅಂಥ ಕಾರ್ಖಾನೆಗಳ ಪಟ್ಟಿಯನ್ನು ಶುಕ್ರವಾರ ಮಾಧ್ಯಮಗಳು ಪ್ರಕಟಿಸಿದ್ದು, ಅದರಲ್ಲಿ ಬಸವೇಶ್ವರ ಶುಗರ್ಸ್ ಸಹ ಸೇರಿದೆ. ಈ ಕಾರ್ಖಾನೆಗೆ ತಾವು ನಿರ್ದೇಶಕ ರೂ ಅಲ್ಲ, ಅಧ್ಯಕ್ಷರೂ ಅಲ್ಲ ಎಂದು ಕಾರಜೋಳ ಸ್ಪಷ್ಟನೆ ನೀಡಿದ್ದಾರೆ.