ಜಿಲ್ಲಾ ಸುದ್ದಿ

ಒಣ ಕಸ ಸಂಗ್ರಹಕ್ಕೆ ಪ್ರತ್ಯೇಕ ವಾಹನ

ಬೆಂಗಳೂರು: ಕಸ ವಿಲೇವಾರಿಗೆ 35 ವಾರ್ಡ್‍ಗಳಲ್ಲಿ ಟೆಂಡರ್ ಕರೆದಿರುವ ಬಿಬಿಎಂಪಿ, ಮೂಲದಲ್ಲೇ ಕಸ ವಿಂಗಡಣೆ ಹಾಗೂ 2 ದಿನಗಳಿಗೊಮ್ಮೆ ಒಣ ಕಸ ಸಂಗ್ರಹಕ್ಕೆ ಪ್ರತ್ಯೇಕ ವಾಹನ ನಿಗದಿಪಡಿಸುವ ನಿಯಮ ಜಾರಿ ಮಾಡಿದೆ.

ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಬಿಬಿಎಂಪಿ ಆಡಳಿತಾಧಿಕಾರಿ ಟಿ.ಎಂ. ವಿಜಯಭಾಸ್ಕರ್, 113 ವಾರ್ಡ್‍ಗಳಲ್ಲಿ ಕಸ ವಿಲೇವಾರಿಗೆ ಟೆಂಡರ್ ಕರೆಯಲಿದ್ದು, ಮೊದಲ ಹಂತವಾಗಿ 35 ವಾರ್ಡ್‍ಗಳಲ್ಲಿ ಟೆಂಡರ್ ಕರೆಯಲಾಗಿದೆ. ಹಸಿ ಹಾಗೂ ಒಣ ಕಸ ಪ್ರತ್ಯೇಕವಾಗಿ ವಿಂಗಡಿಸಿ ವಿಲೇವಾರಿ ಮಾಡುವಂತೆ ನಿಯಮ ತರಲಾಗಿದೆ.

ಜೊತೆಗೆ ಈ ವಾರ್ಡ್‍ಗಳಲ್ಲಿ ಪ್ರತ್ಯೇಕ ವಾಹನ ನಿಗದಿಪಡಿಸಿ 2 ದಿನಗಳಿಗೊಮ್ಮೆ ಒಣ ಕಸ ಮಾತ್ರ ಸಂಗ್ರಹಿಸುವ ನಿಯಮ ಜಾರಿ ಮಾಡಲಾಗಿದೆ. ಹೆಚ್ಚಿನ ವಾರ್ಡ್‍ಗಳಲ್ಲಿ ಕಸ ವಿಲೇವಾರಿ ಗುತ್ತಿಗೆ ಕಳೆದ ಡಿಸೆಂಬರ್ ವೇಳೆಗೆ ಪೂರ್ಣಗೊಂಡಿದ್ದು, ಹೊಸದಾಗಿ ಟೆಂಡರ್ ಕರೆಯಲಾಗುತ್ತಿದೆ. 1 ಸಾವಿರ ಮನೆಗಳಿಗೆ ಒಂದು ಕಸದ ವಾಹನ ನೀಡುವ ನಿಯಮ ಬದಲಿಸಿ 750 ಮನೆಗಳಿಗೆ ಒಂದು ಕಸ ಗಾಡಿ ನೀಡುವಂತೆ ಸೂಚಿಸಲಾಗಿದೆ ಎಂದರು.

ಟೆಂಡರ್‍ಗೆ ಮಿತಿ: ಗುತ್ತಿಗೆದಾರರ ಬಳಿ ಪುಷ್ಕಾರ್ಟ್ ಹಾಗೂ ಆಟೊ ಟಿಪ್ಪರ್‍ಗಳ ಕೊರತೆಯಿರುವುದರಿಂದ ಹಸಿ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿಲ್ಲ. ಬಿವಿಜಿ ಸಂಸ್ಥೆಯು 50ಕ್ಕೂ ಹೆಚ್ಚು ಪ್ಯಾಕೇಜ್‍ಗಳನ್ನು ತೆಗದುಕೊಳ್ಳುವಲ್ಲಿ ವಿಫಲವಾಗಿತ್ತು. ಹೀಗಾಗಿ ಒಂದು ಸಂಸ್ಥೆಗೆ 5 ಪ್ಯಾಕೇಜ್‍ಗಳಲ್ಲಿ ಟೆಂಡರ್‍ನಲ್ಲಿ ಭಾಗವಹಿಸಲು ಮಿತಿ ನೀಡಲಾಗಿದೆ. 35 ವಾರ್ಡ್‍ಗಳನ್ನು ಬಿಟ್ಟು, ಉಳಿದ ವಾರ್ಡ್‍ಗಳಿಗೆ ಟೆಂಡರ್ ಕರೆಯಲು ಅಂದಾಜುಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಟೆಂಡರ್ ಕರೆಯಲು ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುವ ಸಾಧ್ಯತೆಯಿದೆ. ಅಗತ್ಯವಿದ್ದರೆ ಈ ಬಗ್ಗೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

ಉದ್ಯಾನಗಳ ಪರಿಶೀಲನೆ: ನಗರದ ಉದ್ಯಾನಗಳ ನಿರ್ವಹಣೆ ಪರಿಶೀಲಿಸಲು ರಸ್ತೆಗುಂಡಿಗಳ ಪರಿಶೀಲನೆ ನಡೆಸಿದ ತಂಡವನ್ನೇ ನಿಯೋಜಿಸಲಾಗಿದೆ. ಈಗಾಗಲೇ ಪರಿಶೀಲನೆ ನಡೆದಿದ್ದು, ಶೇ.80ರಷ್ಟು ವರದಿಯನ್ನು ಅಧಿಕಾರಿಗಳ ತಂಡ ನೀಡಿದೆ ಎಂದರು.

ರು.25 ಲಕ್ಷ ದಂಡ
ರಸ್ತೆ ಡಾಂಬರೀಕರಣ ಮಾಡಿದ 3 ವರ್ಷದೊಳಗೆ 279 ರಸ್ತೆಗಳಲ್ಲಿ 906 ಗುಂಡಿಗಳಾಗಿರುವುದನ್ನು, ಅಧಿಕಾರಿಗಳ 52 ತಂಡಗಳು ಪತ್ತೆ ಮಾಡಿವೆ. ಗುತ್ತಿಗೆದಾರರು ಕಳಪೆ ಗುಣಮಟ್ಟದಲ್ಲಿ ರಸ್ತೆ ಕಾಮಗಾರಿ ನಡೆಸಿದ್ದು, ನಿರ್ವಹಣಾ ಅವಧಿಯಿದ್ದರೂ ಗುಂಡಿ ಮುಚ್ಚಿಸಿಲ್ಲ. ಹೀಗಾಗಿ ಗುತ್ತಿಗೆದಾ ರರಿಗೆ ರು.25 ಲಕ್ಷ ದಂಡ ವಿಧಿಸಲಾಗಿದೆ. ಡಾಂಬರೀಕರಣ ಮಾಡಿರುವ ರಸ್ತೆಗಳಲ್ಲಿ ಕಾಣಿಸುವ 1 ಗುಂಡಿಗೆ ರು.2 ಸಾವಿರ, 2 ಗುಂಡಿಗೆ ರು.4 ಸಾವಿರ, 3 ಗುಂಡಿಗೆ ರು.8 ಸಾವಿರದಂತೆ ಏರಿಕೆ ಕ್ರಮದಲ್ಲಿ ದಂಡ ವಿಧಿಸಲಾಗುತ್ತಿದೆ ಎಂದು ವಿಜಯಭಾಸ್ಕರ್ ಮಾಹಿತಿ ನೀಡಿದರು.

SCROLL FOR NEXT