ಬೆಂಗಳೂರು: ಎಂ.ಜಿ.ರಸ್ತೆಯಲ್ಲಿ ಸೂಕ್ತ ರೀತಿಯಲ್ಲಿ ಕಸ ವಿಲೇವಾರಿ ಮಾಡದ ಗುತ್ತಿಗೆದಾರನಿಗೆ ಮೇಯರ್ ಶಾಂತಕುಮಾರಿ ರು.25 ಸಾವಿರ ದಂಡ ವಿಧಿಸಿದ್ದಾರೆ.
ಎಂ.ಜಿ.ರಸ್ತೆಯ ತಂದೂರ್ ರೆಸ್ಟೋರೆಂಟ್ ಹಾಗೂ ಪ್ರೆಸ್ಟೀಜ್ ಟವರ್ ಬಳಿ ರಸ್ತೆಯ ಮೋರಿಗಳಲ್ಲಿ ಕಸ ಹಾಕಲಾಗುತ್ತಿದೆ ಎಂದು ಸಾರ್ವಜನಿಕರಿಂದ ದೂರು ಕೇಳಿಬಂದಿತ್ತು. ಸೋಮವಾರ ಸ್ಥಳಕ್ಕೆ ದಿಢೀರ್ ಭೇಟಿ ನೀಡಿದ ಮೇಯರ್ ಶಾಂತಕುಮಾರಿ, ಕಸ ವಿಲೇವಾರಿ ಮಾಡದ ಗುತ್ತಿಗೆದಾರನ ಮೇಲೆ ಕ್ರಮ ಕೈಗೊಳ್ಳದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಸವನ್ನು ಮೋರಿಯಲ್ಲಿ ಹಾಕುತ್ತಿದ್ದರೂ ಸ್ಥಳೀಯ ಅಧಿಕಾರಿಗಳು ಸುಮ್ಮನಿದ್ದಾರೆ.
ಕಸವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂಬ ಆದೇಶವನ್ನು ಪಾಲಿಸದ ಗುತ್ತಿಗೆದಾರನ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಹೀಗಾಗಿ ಕೂಡಲೇ ಗುತ್ತಿಗೆದಾರನಿಗೆ ರು.25 ಸಾವಿರ ದಂಡ ವಿಧಿಸಬೇಕು. ಕೆಲವು ಪಾದಚಾರಿ ಮಾರ್ಗಗಳಲ್ಲಿ ಮರದ ಕೊಂಬೆ ಹಾಗೂ ಕಟ್ಟಡ ತ್ಯಾಜ್ಯವಿದ್ದು, ಕೂಡಲೇ ಶುಚಿಗೊಳಿಸಬೇಕು ಎಂದು ಆದೇಶಿಸಿದರು. ಗರುಡಾಮಾಲ್ ಬಳಿಯ ರಸ್ತೆಗಳಲ್ಲಿ ಪರಿಶೀಲನೆ ನಡೆಸಿದ ಮೇಯರ್ ಶಾಂತಕುಮಾರಿ, ಒಎಫ್ ಸಿ ಕೇಬಲ್ ಅಳವಡಿಸಲು ರಸ್ತೆ ಬದಿ ಹಾಗೂ ಪಾದಚಾರಿ ಮಾರ್ಗ ಅಗೆದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕೇಬಲ್ ಅಳವಡಿಸಲು ತೆಗೆದುಹಾಕಿರುವ ಪಾದಚಾರಿ ಮಾರ್ಗದ ಕಲ್ಲುಗಳು ಹಾಗೂ ರಸ್ತೆ ಗುಂಡಿಗಳನ್ನು ಶೀಘ್ರವಾಗಿ ಮುಚ್ಚಬೇಕು. ಕೂಡಲೇ ಕಾಮಗಾರಿ ನಡೆಸದಿದ್ದರೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು. ಉಪಮೇಯರ್ ರಂಗಣ್ಣ ಹಾಜರಿದ್ದರು.