ಜಿಲ್ಲಾ ಸುದ್ದಿ

ಲೈಂಗಿಕ ದೌರ್ಜನ್ಯ: ಮಕ್ಕಳಿಗೆ ಶಾಲೆಗಳಲ್ಲೇ ಅರಿವು ಮೂಡಿಸಿ

ಬೆಂಗಳೂರು: ಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯ ಅತ್ಯಂತ ಅಮಾನವೀಯ ಕೃತ್ಯವಾಗಿದ್ದು, ಅದನ್ನು ಎದುರಿಸುವ ಬಗ್ಗೆ ಶಾಲೆಗಳಲ್ಲೇ ಮಕ್ಕಳಿಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಗೃಹ ಇಲಾಖೆ ಮತ್ತು ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ನಗರದ ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ನಡೆದ `ವಿದ್ಯಾರ್ಥಿ ಪೊಲೀಸ್ ಕೆಡೆಟ್ ಯೋಜನೆ' ಉದ್ಘಾಟಿಸಿ ಮಾತನಾಡಿದ ಅವರು, ಶಾಲೆಗಳಲ್ಲೇ ವಿದ್ಯಾರ್ಥಿಗಳಿಗೆ ಉತ್ತಮ ಆಚಾರ-ವಿಚಾರಗಳನ್ನು ಕಲಿಸಬೇಕು. ಎಸ್‍ಪಿಸಿಯ ಸಮವಸ್ತ್ರ ಧರಿಸಿದ ವಿದ್ಯಾರ್ಥಿಗಳು ಯಾವ ತಪ್ಪೂ ಮಾಡಬಾರದು. ತಪ್ಪು ಮಾಡುವ ಸನ್ನಿವೇಶ ಬಾರದ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಬಾಲ್ಯದಿಂದಲೇ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ಬೆಳೆಯಬೇಕು. ಕಾನೂನಿನ ಬಗ್ಗೆ ಅರಿವು ಇದ್ದರೆ, ಅಪರಾಧ ಕೃತ್ಯಗಳು ತಂತಾನೇ ಕಡಿಮೆಯಾಗುತ್ತವೆ. ದೇಶದ ಭವಿಷ್ಯವನ್ನು ರೂಪಿಸುವ ಶಕ್ತಿ ಯುವಕರ ಕೈಲಿದ್ದು, ಸ್ಟೂಡೆಂಟ್ ಪೊಲೀಸ್ ಯೋಜನೆ ಸಹಕಾರಿಯಾಗಲಿದೆ. ಯೋಜನೆಯಲ್ಲಿ ಬರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಈಗ ಬೋಧಿಸುತ್ತಿರುವ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣವನ್ನು ಬೋಧಿಸುವುದು ಸಹ ಅನಿವಾರ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಗೃಹಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು ಮೂಡಿಸಲು ಯೋಜನೆ ಉತ್ತಮ ವೇದಿಕೆಯಾಗಿದ್ದು, ಈಗಾಗಲೇ ತರಬೇತಿ ಆರಂಬಿsಸಲಾಗಿದೆ ಎಂದರು. ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್, ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ, ವಿಧಾನಪರಿಷತ್ ಸದಸ್ಯ ಗೋವಿಂದರಾಜು, ಗೃಹಮಂತ್ರಿಗಳ ಸಲಹೆಗಾರ ಕೆಂಪಯ್ಯ, ಶಿಕ್ಷಣ ಇಲಾಖೆಯ ಆಯುಕ್ತ ಮೊಹಮದ್ ಮೊಹಸಿನ್ ಸೇರಿದಂತೆ ಪ್ರಮುಖರು ಹಾಜರಿದ್ದರು.

ಏನಿದು ಸ್ಟೂಡೆಂಟ್ ಪೊಲೀಸ್ ಯೋಜನೆ?

ಸ್ಟೂಡೆಂಟ್ ಪೊಲೀಸ್ ಯೋಜನೆ ಸರ್ಕಾರಿ ಯೋಜನೆಯಾಗಿದ್ದು, ಮಕ್ಕಳಲ್ಲಿ ಕಾನೂನು, ಅಪರಾಧದ ಬಗ್ಗೆ ಅರಿವು ಮೂಡಿಸಿ ಶಿಸ್ತನ್ನು ಬೆಳೆಸಲಾಗುತ್ತದೆ. ಬಜೆಟ್‍ನಲ್ಲಿ ಅದಕ್ಕಾಗಿ ರು.1.8 ಕೋಟಿ ಮೀಸಲಿಡಲಾಗಿದೆ. ಪ್ರಾರಂಭಿಕ ಹಂತವಾಗಿ ಇದನ್ನು ರಾಜ್ಯದ 35 ಸರ್ಕಾರಿ, ಅನುದಾನಿತ ಶಾಲೆ, ಬಿಬಿಎಂಪಿ ಶಾಲೆಗಳಲ್ಲಿ ಜಾರಿಗೆ ತರಲಾಗುತ್ತಿದೆ. 8 ಮತ್ತು 9ನೇ ತರಗತಿಯ 750 ವಿದ್ಯಾರ್ಥಿಗಳು, 750 ವಿದ್ಯಾರ್ಥಿನಿಯರು ಸೇರಿದಂತೆ 1500 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಪ್ರತಿ ಶಾಲೆಯಿಂದ ಇಬ್ಬರು ಶಿಕ್ಷಕರನ್ನು ನೇಮಿಸಲಾಗಿದೆ. ಆಯ್ಕೆಯಾದ 35 ಶಾಲೆಗಳಲ್ಲಿ ಪ್ರತಿ ಶಾಲೆಯ 44 ಮಕ್ಕಳಿಗೆ ಆಯಾ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಪ್ರತಿ ಶನಿವಾರ ರಾಷ್ಟ್ರೀಯ ಭಾವೈಕ್ಯತೆ, ದೈಹಿಕ ಶಿಕ್ಷಣ, ಶಸಾಸ್ತ್ರಗಳ ಬಗ್ಗೆ ತರಬೇತಿ, ಪರಿಸರ, ಸ್ವಯಂ ರಕ್ಷಣೆ ವಿಚಾರಗಳಲ್ಲಿ ಅಗತ್ಯ ತರಬೇತಿ ನೀಡಲಿದ್ದಾರೆ. ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ಯೋಜನೆಯ ಸಮನ್ವಯಾಧಿಕಾರಿಯಾಗಿದ್ದಾರೆ.

SCROLL FOR NEXT